ಮಂಡ್ಯ: ‘ಕಬ್ಬಿನಗದ್ದೆಯಲ್ಲಿ ಬಾಲಕಿಯನ್ನು ಕೊಲೆ ಮಾಡಿದ 17 ವರ್ಷ ವಯಸ್ಸಿನ ಆರೋಪಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಕಾಲೇಜು ಆರಂಭಗೊಳ್ಳದ ಕಾರಣ ಆತ ಹುರುಗಲವಾಡಿ ಗ್ರಾಮದಲ್ಲೇ ಓಡಾಡಿಕೊಂಡಿದ್ದ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದರು.
‘ಬಾಲಕಿಯ ಪೋಷಕರು ಉತ್ತರ ಕರ್ನಾಟಕ ಭಾಗದಿಂದ ಕಬ್ಬು ಕಡಿಯಲು ಬಂದಿದ್ದರು. ಆರೋಪಿ ಮನೆಯ ಸಮೀಪದಲ್ಲೇ ಅವರು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದರು. ಆರೋಪಿಯು ಆಗಾಗ ಇವರ ಮನೆಗೆ ಬಂದು ಹೋಗುತ್ತಿದ್ದ. ಮೀನು ಹಿಡಿಯಲು ಹೋಗುವುದಾಗಿ ತಿಳಿಸಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಈತ ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿ ಒಪ್ಪದಿದ್ದಾಗ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಅತ್ಯಾಚಾರ ಎಸಗುವ ಉದ್ದೇಶದಿಂದಲೇ ಆತ ಕಬ್ಬಿನಗದ್ದೆಗೆ ಕರೆದುಕೊಂಡು ಹೋಗಿದ್ದ. ಬಾಲಕಿ ಅದಕ್ಕೆ ನಿರಾಕರಿಸಿ, ಕಿರುಚಿಕೊಂಡಾಗ ಹತ್ಯೆ ಮಾಡಿದ್ದಾನೆ. ಆರಂಭದಲ್ಲಿ ತನಗೆ ಏನೂ ಗೊತ್ತಿಲ್ಲ ಎಂದು ತಿಳಿಸಿದ್ದ, ಆದರೆ ಪೊಲೀಸರು ಬಾಲಕನನ್ನು ಹೆಚ್ಚಿಗೆ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ವಿಚಾರ ಒಪ್ಪಿಕೊಂಡಿದ್ದಾನೆ.ಆರೋಪಿಯನ್ನು ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಿ ಮಕ್ಕಳ ಪರಿವೀಕ್ಷಣಾಲಯದ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದರು.
‘ಆರೋಪಿ ಹಾಗೂ ಆ ಕುಟುಂಬದ ಬಗ್ಗೆ ಗ್ರಾಮದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಆತ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಸ್ಥಳೀಯರು ತಿಳಿಸುತ್ತಾರೆ. ಆದರೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಕುಟುಂಬದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು. ಬಾಲಕಿ ಕುಟುಂಬ ಸದಸ್ಯರಿಗೆ ಸಮಾಜ ಕಲ್ಯಾಣ ಇಲಾಖೆ, ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆ ಆಡಳಿತ ಮಂಡಳಿ ಪರಿಹಾರ ನೀಡಿದೆ’ ಎಂದು ಹೇಳಿದರು.
‘ಉತ್ತರ ಕರ್ನಾಟಕ ಭಾಗದಿಂದ ಕಬ್ಬು ಕಡಿಯಲು ಬರುವ ಕಾರ್ಮಿಕರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಮಿಕರ ಪಟ್ಟಿ ಸಿದ್ಧಪಡಿಸಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗುವುದು. ಸರ್ಕಾರದಿಂದ ಸಿಗುವ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು’ ಎಂದರು.
‘ಕಾರ್ಮಿಕ ಗುತ್ತಿಗೆದಾರರ ಮೂಲಕ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳು ಕಾರ್ಮಿಕರನ್ನು ಕರೆಸಿಕೊಳ್ಳುತ್ತವೆ. ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಲಾಗಿದೆ. ಆಲೆಮನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ವರ್ಷದಲ್ಲಿ 50 ಕೊಲೆ
‘ಜಿಲ್ಲಾ ವ್ಯಾಪ್ತಿಯಲ್ಲಿ ವರ್ಷಕ್ಕೆ 48–50 ಕೊಲೆ ಪ್ರಕರಣಗಳು ವರದಿಯಾಗುತ್ತಿವೆ. ಈ ವರ್ಷ ಇಲ್ಲಿಯವರೆಗೂ 43 ಕೊಲೆ ಪ್ರಕರಣಗಳು ನಡೆದಿವೆ’ ಎಂದು ಎಸ್‌ಪಿ ಪರಶುರಾಂ ಹೇಳಿದರು.
‘ಬಹುತೇಕ ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ. ಖಾಸಗಿ ಕಾರಣಕ್ಕೆ ಕೊಲೆ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಕಂಡು ಬಂದಿಲ್ಲ. ಶೀಘ್ರ ಆರೋಪಿಗಳನ್ನು ಪತ್ತೆ ಮಾಡಲು ಶ್ರಮಿಸಲಾಗುತ್ತಿದೆ’ ಎಂದರು.
ಬಲವಂತದ ಬಂದ್‌ಗೆ ಅವಕಾಶವಿಲ್ಲ
‘ಶನಿವಾರ ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ, ಆದರೆ ಬಲವಂತದ ಬಂದ್‌ಗೆ ಪೊಲೀಸ್ ಇಲಾಖೆ ಅವಕಾಶ ನೀಡುವುದಿಲ್ಲ. ಮೆರವಣಿಗೆ, ರಸ್ತೆತಡೆಗೆ ಅವಕಾಶ ಇರುವುದಿಲ್ಲ’ ಎಂದು ಎಸ್‌ಪಿ ಹೇಳಿದರು.
‘ಯಾವುದೇ ಸಂಘಟನೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಅರ್ಪಿಸಲು ಮಾತ್ರ ಅವಕಾಶ ಇರುತ್ತದೆ. ನಿಯಮ ಉಲ್ಲಂಘಿಸಿ ರಸ್ತೆತಡೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.