
ಮಂಡ್ಯ: ‘ರೈತರಿಗೆ ಸಾಲ ನೀಡಿ ಕಿರುಕುಳ ನೀಡದೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಅದನ್ನು ಮೀರಿ ತೊಂದರೆ ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪಡಿತರ ಚೀಟಿದಾರರಲ್ಲಿ ಆದಾಯ ತೆರಿಗೆದರಾರರ ಪಡಿತರ ಚೀಟಿಯನ್ನು ರದ್ದು ಪಡಿಸಲು ಆದೇಶ ಹೊರಡಿಸಿರುವ ಅನ್ವಯ ಪಡಿತರ ಚೀಟಿಯನ್ನು ರದ್ದು ಪಡಿಸಲಾಗುತ್ತಿದ್ದು, ಕುಟುಂಬದಲ್ಲಿ ಯಾರೇ ಆದಾಯ ತೆರಿಗೆದಾರರಾಗಿದ್ದರು ಚೀಟಿ ರದ್ದಾಗುವ ಸಾಧ್ಯತೆಯಿರುತ್ತದೆ’ ಎಂದರು.
‘ಆದಾಯ ತೆರಿಗೆ ನೀಡದ ಬಿಪಿಎಲ್ ಪಡಿತರ ಕುಟುಂಬಸ್ಥರು ಪಡಿತರ ಚೀಟಿ ರದ್ದಾಗಿದ್ದಲ್ಲಿ ವರದಿ ಸಲ್ಲಿಸಿ ಇದರ ಬಗ್ಗೆ ಕ್ರಮ ವಹಿಸಲಾಗುವುದು. ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನ ಸೌಲಭ್ಯ ಒದಗಿಸುವಲ್ಲಿ ಸಮಸ್ಯೆಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿರುವುದು ದೂರಿನಲ್ಲಿ ಕಂಡು ಬರುತ್ತಿದ್ದು, ವಿನಾಕಾರಣ ಅರ್ಹ ಫಲಾನುಭವಿಗಳನ್ನು ಅಲೆದಾಡಿಸುವುದು, ನಿರ್ಲಕ್ಷ್ಯತನ ತೋರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗಾಗಿ ನಿಗಾವಹಿಸಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಅಕ್ಕಿ ವಿತರಿಸುವಲ್ಲಿ ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಅನೇಕ ದೂರುಗಳು ಕಂಡು ಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಯಾವುದೇ ಸಮಸ್ಯೆ ಇದ್ದರೂ ಸ್ಥಳದಲ್ಲಿಯೇ ಪರಿಹರಿಸಿ ನೆರವಾಗಿ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪ್ರತೀಕ್ ಹೆಗ್ಡೆ, ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್, ಸಹ ಸಂಚಾಲಕ ಲಿಂಗರಾಜುಮೂರ್ತಿ, ಮುಖಂಡರಾದ ಸುನೀತಾ, ಕುಳ್ಳೇಗೌಡ, ಅಬ್ದುಲ್ ಸುಖುರ್, ನಂಜುಂಡಸ್ವಾಮಿ, ಶೋಭಾ ಭಾಗವಹಿಸಿದ್ದರು.
₹2 ಲಕ್ಷದವರೆಗೆ ಜಾಮೀನು ರಹಿತ ಸಾಲ ನೀಡಲು ಅವಕಾಶವಿದೆ. ₹2 ಲಕ್ಷ ಸಾಲ ನೀಡಲು ಜಾಮೀನು ದಾಖಲೆಗಳನ್ನು ಕೇಳುವುದು ಕಂಡು ಬಂದಲ್ಲಿ ಸಂಸ್ಥೆಗಳಿಗೆ ನೋಟಿಸ್ ವಿತರಿಸಲಾಗುವುದು.– ಕುಮಾರ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.