ಶ್ರೀರಂಗಪಟ್ಟಣ: ಆರತಿ ಉಕ್ಕಡದಲ್ಲಿ ‘ತಡೆ’ ಒಡೆಸಿದ ನಟ ದರ್ಶನ್
ಶ್ರೀರಂಗಪಟ್ಟಣ: ನಟ ದರ್ಶನ್ ತೂಗುದೀಪ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ಬುಧವಾರ ಮಧ್ಯಾಹ್ನ ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಿದರು.
ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ಶಾಸಕ ದರ್ಶನ್ ಪುಟ್ಟಣ್ಣಯ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿದ ದರ್ಶನ್ ಅಹಲ್ಯಾದೇವಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಪಕ್ಕದಲ್ಲಿ ದೋಷ ನಿವಾರಣೆಗಾಗಿ ‘ತಡೆ’ ಒಡೆಸಿದರು. ಕಲ್ಯಾಣಿಯಲ್ಲಿ ಮಡಕೆ ಚೂರುಗಳ ಕಟ್ಟೆ ಒಡೆದರು. ಬಳಿಕ ಎಳ್ಳು ಜೀರಿಗೆ ತರ್ಪಣ ಮತ್ತು ಮೊಟ್ಟೆ ಒಡೆಯುವ ಸಾಂಪ್ರದಾಯಿಕ ಆಚರಣೆಯಲ್ಲಿಯೂ ಪಾಲ್ಗೊಂಡರು.
ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ. ಚಂದ್ರು ದರ್ಶನ್ ಮತ್ತು ಅವರ ಕುಟುಂಬ ಸದಸ್ಯರನ್ನು ದೇವಿಯ ಮುಂದೆ ನಿಲ್ಲಿಸಿ ದೇವಿಗೆ ಪೂಜೆ ಸಲ್ಲಿಸಿದರು. ದೇವಿಯ ಮೇಲಿನ ಹೂವಿನ ಹಾರವನ್ನು ಪ್ರಸಾದವಾಗಿ ನೀಡಿದರು.
‘ದರ್ಶನ್ ಅವರಿಗೆ ಒಳಿತು ಬಯಸಿ ಅವರ ಕುಟುಂಬದವರು ಅಹಲ್ಯಾದೇವಿ ಮಾರಮ್ಮನಿಗೆ ಹರಕೆ ಹೊತ್ತಿದ್ದರು. ಅದರಂತೆ ಹರಕೆ ತೀರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಅಭಿಮಾನಿಗಳು ದರ್ಶನ್ ಅವರ ಜತೆ ಫೋಟೊ ತೆಗೆಸಿಕೊಳ್ಳಲು ಪ್ರಯತ್ನ ನಡೆಸಿದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.