ನಾಗಮಂಗಲ (ಮಂಡ್ಯ ಜಿಲ್ಲೆ): ಆದಿಚುಂಚನಗಿರಿ ಜಾತ್ರೆ ಮಹೋತ್ಸವದ ಅಂಗವಾಗಿ ಬುಧವಾರ ಇಲ್ಲಿ ನಡೆದ ಜ್ವಾಲಾಪೀಠಾರೋಹಣ ಮತ್ತು ಸಿದ್ಧ ಸಿಂಹಾಸನ ಪೂಜೆಗಳಿಗೆ ನೂರಾರು ಭಕ್ತರು ಸಾಕ್ಷಿಯಾದರು.
ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಪರಶಿವನು ಬಂದು ತಪಸ್ಸು ಮಾಡಿದ ಸ್ಥಳವೇ ಜ್ವಾಲಾಪೀಠವೆಂಬ ನಂಬಿಕೆಗೆ ಅನುಗುಣವಾಗಿ, ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಬುಧವಾರ ರಾತ್ರಿ ಸರ್ವಾಲಂಕೃತರಾಗಿ ಪೂಜೆ ಸಲ್ಲಿಸಿ ಜ್ವಾಲಾಪೀಠಾರೋಹಣ ಮಾಡಿದರು. ‘ಕೈಲಾಸದಲ್ಲಿ ಪರಶಿವನನ್ನೇ ದರ್ಶನ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂಬ ನಂಬಿಕೆಯಿಂದ ಭಕ್ತರು ದರ್ಶನ ಪಡೆದರು.
ಜೊತೆಗೆ ಸ್ವಾಮೀಜಿ ಸಿದ್ಧಸಿಂಹಾಸನದಲ್ಲಿ ಆಸೀನರಾಗಿಯೂ ದರ್ಶನ ನೀಡಿದರು. ನಂತರ, ಚಿನ್ನದ ಕಿರೀಟ ಧರಿಸಿ, ಸಾವಿರಾರು ಭಕ್ತರ ನಡುವೆ ಸಂಸ್ಕೃತ ಶಾಲೆಯ ವಟುಗಳ ವೇದಘೋಷದ ಮೆರವಣಿಗೆಯಲ್ಲಿ ಆಗಮಿಸಿ ಕಾಲಭೈರವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು.
ನಂತರ ಭಕ್ತರಿಗೆ ವಿಭೂತಿ ತಿಲಕವನ್ನಿಟ್ಟು ಆಶೀರ್ವದಿಸಿದರು. ಕ್ಷೇತ್ರದ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಮಠದ ವೇದಪಂಡಿತರು, ವಟುಗಳು, ಷೋಡೋಶೋಪಚಾರ ಪೂಜೆಗಳನ್ನು ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.