ಮಂಡ್ಯ: ಕಬ್ಬು, ಭತ್ತದ ಹೊಸ ತಳಿಗಳ ಆವಿಷ್ಕಾರ, ದ್ವಿದಳ ಧಾನ್ಯಗಳ ಸುಧಾರಿತ ತಳಿಗಳ ಅನುಷ್ಠಾನ, ಬೆಳೆ ಕಟಾವು, ನಾಟಿ, ಕಳೆ ತೆಗೆಯುವ ಯಂತ್ರೋಪಕರಣಗಳ ಪ್ರದರ್ಶನ, ವಿವಿಧ ಕೃಷಿ ವಿಧಾನಗಳ ಪ್ರಾತ್ಯಕ್ಷಿಕೆ... ಇವು ಈ ಬಾರಿಯ ಕೃಷಿ ಮೇಳದ ವಿಶೇಷಗಳು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯದ ಆಶ್ರಯದಲ್ಲಿ ಬುಧವಾರ ವಿ.ಸಿ.ಫಾರಂ ಆವರಣದಲ್ಲಿ ಆರಂಭವಾದ ಕೃಷಿ ಮೇಳ ಹಲವು ಹೊಸತನಗಳಿಗೆ ಸಾಕ್ಷಿಯಾಯಿತು. ಕೋವಿಡ್ ಭಯದಿಂದಾಗಿ ಅಷ್ಟೇನೂ ರೈತರು, ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳದಿದ್ದರೂ ಕೃಷಿ ಮೇಳದ ವಿಶೇಷಗಳಿಗೆ ಕೊರತೆ ಇರಲಿಲ್ಲ.
ಪ್ರವೇಶ ದ್ವಾರದಲ್ಲಿಯೇ ಕಬ್ಬು, ಭತ್ತ, ಮುಸುಕಿನ ಜೋಳ, ಸೊಪ್ಪು ಮತ್ತು ತರಕಾರಿ ಸೇರಿದಂತೆ ವಿವಿಧ ಹೊಸ ಸುಧಾರಿತ ಬೆಳೆಗಳ ಮಾಹಿತಿ, ಪ್ರತ್ಯಾಕ್ಷಿಕೆ ನೀಡಲಾಗುತ್ತಿತ್ತು. ವಿವಿಧೆಡೆ ಭತ್ತದ ತಾಕುಗಳಿಗೆ ಭೇಟಿ ನೀಡುತ್ತಿದ್ದ ರೈತರು ಕಾಯಿಕಟ್ಟಿದ ಕಾಳುಗಳನ್ನು ಊರಿಕೊಂಡು ಅದರ ರುಚಿ ನೋಡಿದರು.
ಜನರು ಕೃಷಿ ಸಲಕರಣೆಗಳು, ಹೈನುಗಾರಿಕೆ, ಸಾವಯವ ಪದಾರ್ಥಗಳು, ಸಾವಯವ ಗೊಬ್ಬರ, ಕೀಟನಾಶಕ ಸೇರಿದಂತೆ ರೈತರಿಗೆ ಅನುಕೂಲವಾಗುವ ಮಳಿಗೆಗಳನ್ನು ತರೆಯಲಾಗಿತ್ತು. ಸರತಿ ಸಾಲಿನಂತೆ ಮಳಿಗೆಗೆ ಹೋಗುತ್ತಿದ್ದ ರೈತರು, ವಿದ್ಯಾರ್ಥಿಗಳು ತಜ್ಞರಿಂದ ಮಾಹಿತಿ ಪಡೆದುಕೊಂಡರು.
‘ಚಿಯಾ’ ಬೀಜಗಳ ಉಪಯೋಗ ತಿಳಿಯಲು ಜನರು ಸಾಲುಗಟ್ಟಿ ನಿಂತಿದ್ದರು. ಹೃದಯ ಸಂಬಂಧಿ ರೋಗ, ಸಕ್ಕರೆ ಕಾಯಿಲೆ ಸೇರಿದಂತೆ ವಿವಿಧ ರೋಗಗಳಿಗೆ ರಾಮಬಾಣವಾಗಿರುವ ಚಿಯಾ ಬೆಳೆಯ ಬಗ್ಗೆ ಆಸಕ್ತಿಯಿಂದ ಮಾಹಿತಿ ಪಡೆಯುತ್ತಿದ್ದರು. ಚಾಮರಾಜನಗರ, ಎಚ್.ಡಿ.ಕೋಟೆಯಲ್ಲಿ ಈ ಬೆಳೆ ಕಾಣಬಹುದಾಗಿದ್ದು, ಎಕರೆಗೆ ನಾಲ್ಕರಿಂದ ಐದು ಕ್ವಿಂಟಲ್ ಬೆಳೆ ಬೆಳೆಯಬಹುದು. ಮಂಡ್ಯ ಜಿಲ್ಲೆಯಲ್ಲಿ ಚಿಯಾ ಬೆಳೆ ಅಭಿವೃದ್ದಿ ಪಡಿಸಿದರೆ ರೈತರು ಉತ್ತಮ ಲಾಭ ಪಡೆಯಬಹುದು ಎಂದು ಕೃಷಿ ವಿದ್ಯಾರ್ಥಿಗಳು ತಿಳಿಸಿದರು.
ಮುಸುಕಿನ ಜೋಳದ ನೂತನ ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು, ವಾಣಿಜ್ಯ ಬೆಳೆಗಳಲ್ಲಿ ಸುಧಾರಿತ ಕಬ್ಬಿನ ತಳಿಗಳು, ಅಂಗಾಂಶ ಕೃಷಿ ತಂತ್ರಜ್ಞಾನದಲ್ಲಿ ಕಬ್ಬಿನ ಸಸಿಗಳ ಉತ್ಪಾದನೆ, ಕಬ್ಬಿನಲ್ಲಿ ಆಧುನಿಕ ಬೇಸಾಯ ತಾಂತ್ರಿಕತೆಗಳು, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕಾ ಪ್ರಾತ್ಯಕ್ಷಿಕೆ, ವಿವಿಧ ಹತ್ತಿ ತಳಿಗಳ ಪ್ರಾತ್ಯಕ್ಷಿಕೆ, ಮೇವಿನ ಬೆಳೆಗಳಲ್ಲಿ ಸುಧಾರಿತ ತಳಿ, ರಸಮೇವು ಮತ್ತು ಅಜೋಲ ಉತ್ಪಾದನೆ, ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳಲ್ಲಿ ತೊಗರಿ, ಅಲಸಂದೆ, ಅವರೆ, ಹೆಸರು, ಉದ್ದು, ಹುರುಳಿ, ಸೂರ್ಯಕಾಂತಿ, ನೆಲೆಗಡಲೆ ಬೆಳೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು.
ತೋಟಗಾರಿಕೆ ಬೆಳೆಗಳಾದ ವಿವಿಧ ಸೊಪ್ಪು, ತರಕಾರಿ, ಹೂವಿನ ಬೆಳೆಗಳು, ಔಷಧೀಯ ಮತ್ತು ಸುಗಂಧದ್ರವ್ಯ ಸಸ್ಯ ವ್ಯವಸಾಯದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಬೀಜದಂಟು, ರೆಕ್ಕೆ ಅವರೆ, ಅಕ್ಕಿ ಅವರೆ ಹೆಚ್ಚು ಗಮನ ಸೆಳೆದವು. ಜೊತೆಗೆ ಬಿತ್ತನೆ ಬೀಜಗಳ ಮಾರಾಟದಲ್ಲಿ ಬಿತ್ತನೆ ಮಾಡುವ ವಿಧಾನಗಳ ಬಗ್ಗೆ ತಿಳಿಸಿಕೊಡಲಾಯಿತು, ಗೊಬ್ಬರ ಬಳಕೆ ಹಾಗೂ ತಯಾರಿಸುವುದರ ಬಗ್ಗೆಯೂ ಮಾಹಿತಿ ನೀಡಲಾಗುತ್ತಿತ್ತು.
ವಿವಿಧ ಖಾಸಗಿ ಕಂಪನಿಗಳು ತಮ್ಮ ಕೃಷಿ ಯಂತ್ರೋಪಕರಣಗಳನ್ನು ಮಾರಾಟಕ್ಕೆ ಇಟ್ಟಿದ್ದವು. ವಿವಿಧ ಜಾತಿಯ ಕುರಿ, ಕೋಳಿ, ನಾಟಿ ತಳಿಯ ಎತ್ತುಗಳು ಮೇಳದ ಆಕರ್ಷಣೆಯನ್ನು ಹೆಚ್ಚಳ ಮಾಡಿದ್ದವು. ರೈತರಿಗೆ ಅನುಕೂಲವಾಗುವಂತಹ ವಿವಿಧ ಪರಿಕರಗಳನ್ನು ಮಾರಾಟಕ್ಕೆ ಇಡಲಾಗಿತ್ತು. ರೈತರು ಜಾತ್ರೆಯ ರೀತಿಯಲ್ಲಿ ಕೃಷಿ ಮೇಳದಲ್ಲಿ ಪಾಲ್ಗೊಂಡರು. ವಿವಿಧ ಇಲಾಖೆ ವತಿಯಿಂದ ಮಳಿಗೆ ತೆರೆಯಲಾಗಿತ್ತು.
******
ರಾಗಿ ಲಕ್ಷ್ಮಣಯ್ಯ ಆಶಯದಂತೆ ಅಭಿವೃದ್ಧಿ
ಮೇಳ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಮಾತನಾಡಿ ‘ರೈತರಿಗೆ ಅಗತ್ಯ ಸಹಕಾರ ಸಿಕ್ಕರೆ ಮಾತ್ರ ರೈತರು ಕೃಷಿಯಿಂದ ಖುಷಿಯಾಗಿರುತ್ತಾರೆ. ಮಂಡ್ಯ ಎಂದರೆ ಭತ್ತ, ರಾಗಿ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ 30ಕ್ಕೂ ಹೆಚ್ಚು ರಾಗಿ ತಳಿಗಳ ಅಭಿವೃದ್ಧಿ ಪಡಿಸಲಾಗಿದೆ. ರಾಗಿ ಬ್ರಹ್ಮ ಎಂದೇ ಹೆಸರು ಪಡೆದಿರುವ ರಾಗಿಲಕ್ಷಣಯ್ಯ ಅವರ ಆಶಯದಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರಸ್ತುತದಲ್ಲಿ ಕೆಎಂಆರ್ ರಾಗಿ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದರು.
‘ಭತ್ತದಲ್ಲಿಯೂ 40ಕ್ಕೂ ಹೆಚ್ಚು ತಳಿಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಲಾಗಿದೆ. ಜ್ಯೋತಿ ತಳಿಯ ಬದಲಾಗಿ ಕೆಎಂಆರ್–220 ಹೊಸ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಐಆರ್–64 ತಳಿಯ ಬದಲಿ ಕೆಎಂಆರ್–225 ತಳಿ ಬಿಡುಗಡೆ ಮಾಡಲಾಗಿದೆ. ಈ ತಳಿಗಳಲ್ಲಿ ಎರಡು ರೀತಿಯ ಉಪಯೋಗಗಳಿವೆ, ರೈತರು ಈ ಪ್ರಯೋಜನ ಪಡೆಯಬೇಕು. ಕೆಲವು ಸಂಶೋಧನೆಗಳನ್ನು ಮಾಡಿರುವ ಹಿನ್ನಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಲಾಗಿದೆ’ ಎಂದರು.
ಆದಿಚುಂಚನಗಿರಿ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ ‘ಬೆಳೆಗಳಿಗೆ ಸೂಕ್ತ ಬೆಲೆ ನಿಗಧಿ ಆಗಿಲ್ಲ, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ನಿಂತಿಲ್ಲ, ರೈತರು ಶ್ರಮ ಜೀವಿಗಳಾಗಿದ್ದಾರೆ, ಒಂದೇ ಬೆಳೆಯಲ್ಲಿ ಲಾಭಗಳಿಸುವುದು ಕಷ್ಟವಾಗಿದೆ. ಇಂದು ರಾಸಾಯನಿಕ ಗೊಬ್ಬರವನ್ನು ಯಥೇಚ್ಚವಾಗಿ ಬಳಕೆ ಮಾಡಿ ಬೆಳೆ ಬೆಳೆಯುತ್ತಿರುವುದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಸಾವಯವ ಕೃಷಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.
ಬೆಂಗಳೂರಿನ ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ.ವೈ.ಜಿ.ಷಡಕ್ಷರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್, ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಡಿ.ರಘುಪತಿ, ಡೀನ್ ವಾಸುದೇವನ್, ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಆರ್.ಶ್ರೀರಾಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.