
ನಾಗಮಂಗಲ: ‘ಸ್ವಾತಂತ್ರ್ಯ ಬಂದಾಗಿನಿಂದ ತಾಲ್ಲೂಕಿನಲ್ಲಿ ಸ್ವಂತ ಕೃಷಿ ಇಲಾಖೆ ಕಟ್ಟಡ ನಿರ್ಮಾಣವಾಗಿರಲಿಲ್ಲ. ಕೃಷಿ ಸಚಿವನಾಗಿರುವ ಸಮಯದಲ್ಲೇ ಭೂಮಿ ಪೂಜೆ ಮಾಡಿ ಕಟ್ಟಡ ಉದ್ಘಾಟನೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಟಿ.ಬಿ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಸಹಾಯಕ ಕೃಷಿ ನಿರ್ದೇಶಕರ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಹಿಂದೆ ಕೃಷಿ ಇಲಾಖೆ ಕಟ್ಟಡ ಹುಡುಕಾಡುವ ಪರಿಸ್ಥಿತಿ ಇತ್ತು. ನಾನು ಸಚಿವನಾದ ಬಳಿಕ ರಾಜ್ಯದಾದ್ಯಂತ ಗುರುತಿಸಿರುವ ಕಡೆಗಳಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡಗಳು ನಿರ್ಮಾಣವಾಗಿವೆ. ಮಂಡ್ಯ ಜಿಲ್ಲೆಯಲ್ಲಿಯೇ 15 ರೈತ ಸಂಪರ್ಕ ಕೇಂದ್ರಗಳು ನಿರ್ಮಾಣವಾಗಿವೆ. ಮಂಡ್ಯದಲ್ಲಿ ಜಂಟಿ ನಿರ್ದೇಶಕರ ಕಚೇರಿಯೂ ಆಗಿದೆ. ಪಾಂಡವಪುರ, ಮಳವಳ್ಳಿ ತಾಲ್ಲೂಕುಗಳಲ್ಲಿ ಸ್ಥಳ ಗುರುತಿಸಿಲ್ಲ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕೆಲಸ ಪ್ರಾರಂಭಿಸಲಾಗುವುದು’ ಎಂದು ಭರವಸೆ ನೀಡಿದರು.
ಪೂರ್ವ ಪ್ರಾಥಮಿಕ ಶಿಕ್ಷಣ ಕಲಿಕಾ ಕೇಂದ್ರಗಳಾಗಿ ಆಯ್ಕೆಯಾಗಿರುವ ತಾಲ್ಲೂಕಿನ 56 ಅಂಗನವಾಡಿ ಕೇಂದ್ರಗಳಿಗೆ ಟಿವಿ ಹಸ್ತಾಂತರಿಸಿದರು. ತಾಲ್ಲೂಕಿನ ಬಚ್ಚಿಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಮತ್ತು
ಪಟ್ಟಣದಲ್ಲಿ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕಟ್ಟವನ್ನು ಉದ್ಘಾಟಿಸಿದರು. ಮಣ್ಣಹಳ್ಳಿ ಸಮೀಪ ವಾಹನ ಚಾಲನಾ ತರಬೇತಿ ಕೇಂದ್ರ (ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್) ಹಾಗೂ ಕಂಬದಹಳ್ಳಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಸಹಾಯಕ ಕೃಷಿ ನಿರ್ದೇಶಕ ಹರೀಶ್, ಕೃಷಿ ಅಧಿಕಾರಿ ಯುವರಾಜ್, ಕೃಷಿಕ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್, ರೈತ ಉತ್ಪಾದಕ ಕಂಪನಿಗಳ ರಾಜ್ಯ ನಿದೇರ್ಶಕ ಎನ್.ಜೆ.ರಾಜೇಶ್ ಭಾಗವಹಿಸಿದ್ದರು.
ನಿವೃತ್ತಿ ಪಡೆದು ಮನೆಗೆ ಹೋಗುತ್ತಿದ್ದೆ’
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ‘ನಾನು ಕೆಲಸ ಮಾಡಲು ಅಸಮರ್ಥನಾಗಿದ್ದರೆ ಮಾಜಿ ಶಾಸಕನಾಗಿ ಗುರುತಿಸಿಕೊಂಡಿದ್ದರೆ ಇಷ್ಟೊತ್ತಿಗೆ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿ ಮನೆಗೆ ಹೊಗುತ್ತಿದ್ದನೇ ವಿನಹ ಇನ್ನೊಬ್ಬರ ವಿರುದ್ದ ಮಾತನಾಡುತ್ತಿರಲಿಲ್ಲ’ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ವಾಗ್ಧಾಳಿ ನಡೆಸಿದರು. ನನ್ನ ವಿರುದ್ದ ಮಾತನಾಡಲು ಅವರಿಗೆ ನಾಲಿಗೆ ಹೇಗೆ ಬರೂತ್ತೋ ಗೊತ್ತಿಲ್ಲ ಕಾರ್ಯವೈಖರಿ ಬಗ್ಗೆ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಅಭಿವೃದ್ಧಿಗಳು ಸಾಕ್ಷಿ ಇರುವಾಗ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕೂಡ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.