ADVERTISEMENT

ಕೃಷಿ ಇಲಾಖೆಯಲ್ಲಿ ಶೇ 57ರಷ್ಟು ಹುದ್ದೆಗಳು ಖಾಲಿ: ಸಚಿವ ಎನ್‌. ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 14:47 IST
Last Updated 4 ಜೂನ್ 2023, 14:47 IST
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ ಮತ್ತು ರವಿಕುಮಾರ್‌ ಗಣಿಗ ಭಾನುವಾರ ಭೇಟಿ ನೀಡಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ ಮತ್ತು ರವಿಕುಮಾರ್‌ ಗಣಿಗ ಭಾನುವಾರ ಭೇಟಿ ನೀಡಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು   

ಶ್ರೀರಂಗಪಟ್ಟಣ: ಕೃಷಿ ಇಲಾಖೆಯಲ್ಲಿ ಶೇ 57ರಷ್ಟು ಹುದ್ದೆಗಳು ಖಾಲಿ ಇದ್ದು,  ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ , ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ಸಮೀಪದ ಚಂದ್ರವನ ಆಶ್ರಮಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.  ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕೃಷಿ ಮಾಡುವವರಿಗೆ ಕೀಳರಿಮೆ ಇರಬಾರದು. ವ್ಯವಸಾಯ ವೃತ್ತಿ ಲಾಭದಾಯಕ ಆಗಬೇಕಾದರೆ ಕೃಷಿಯ ಜತೆಗೆ ಉಪ ಕಸುಬುಗಳನ್ನು ಅನುಸರಿಸಬೇಕು. ಕೃಷಿಯನ್ನು ಬಿಟ್ಟು ಯುವಕರು ಬೆಂಗಳೂರು ಇತರ ಕಡೆಗೆ ವಲಸೆ ಹೋಗದಂತೆ ತಡೆಯಬೇಕು. ಕೃಷಿ ಕೂಡ ಅತ್ಯುತ್ತಮ ಹಾಗೂ ಲಾಭ ತರುವ ಕಸುಬು ಎಂಬುದನ್ನು ಸಾಬೀತು ಮಾಡಲು ಅದು ಉದ್ಯಮವಾಗಬೇಕು.ಬೆಂಗಳೂರು ಕೃಷಿ ವಿವಿ ಕುಲಪತಿ ಜತೆ ಚರ್ಚೆ ನಡೆಸಿದ್ದೇನೆ. ಕೃಷಿಗೆ ಪೂರಕವಾದ ಶಿಕ್ಷಣ ಮತ್ತು ತರಬೇತಿ ನೀಡುವ ದಿಸೆಯಲ್ಲಿ ಚಿಂತನೆ ನಡೆದಿದೆ ಎಂದರು.

ADVERTISEMENT

ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಬಳಿಕ ಪಕ್ಷ ಭೇದ ಮರೆತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಚಿವರು, ಶಾಸಕರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ರವಿಕುಮಾರ್‌ ಗಣಿಗ, ಕಾಂಗ್ರೆಸ್‌ ಮುಖಂಡರಾದ ವಿಜಯ್‌ ರಾಮೇಗೌಡ, ರವಿ ಬೋಜೇಗೌಡ, ಕಸಬಾ ಸೊಸೈಟಿ ಮಾಜಿ ಅಧ್ಯಕ್ಷ ಸೋಮಸುಂದರ್‌, ಹಂಗರಹಳ್ಳಿ ಗೋವಿಂದೇಗೌಡ, ಕಸಲಗೆರೆ ನಾಗರಾಜು, ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.