ADVERTISEMENT

ಮಂಡ್ಯ: ಹೊಸಹಳ್ಳಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ

ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳು ಅಬಾಧಿತ, ಕೆಲಕಾಲ ಬ್ಯಾಂಕ್‌ಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 12:52 IST
Last Updated 8 ಜನವರಿ 2020, 12:52 IST
ಪ್ರತಿಭಟನಾ ಮೆರವಣಿಗೆ ವೇಳೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು
ಪ್ರತಿಭಟನಾ ಮೆರವಣಿಗೆ ವೇಳೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು   

ಮಂಡ್ಯ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) , ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ವಿವಿಧ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಮುಷ್ಕರ ಶಾಂತಿಯುತವಾಗಿ ನಡೆಯಿತು. ವಿವಿಧ ಸಂಘಟನೆಗಳ ಸದಸ್ಯರು ಸಿಲ್ವರ್‌ ಜ್ಯೂಬಿಲಿ ಉದ್ಯಾನದಿಂದ ಹೊಸಹಳ್ಳಿ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ನಗರದಲ್ಲಿ ನಡೆದ ಮುಷ್ಕರದಲ್ಲಿ ಕೆಪಿಆರ್‌ಎಸ್‌, ಎಐಎಡಬ್ಲ್ಯು, ಜೆಎಂಎಸ್‌, ಕೆಆರ್‌ಆರ್‌ಎಸ್‌, ಡಿಎಸ್‌ಎಸ್‌, ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಬಿಎಸ್‌ಎನ್‌ಎಲ್‌, ಅಂಚೆ ಇಲಾಖೆ ನೌಕರರ ಸಂಘಟನೆಗಳ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ನಗರದ ಪ್ರಮುಖ ವೃತ್ತ, ಬಸ್‌ ನಿಲ್ದಾಣಗಳ ಬಳಿ ಪೊಲೀಸರನ್ನು ಭದ್ರೆತೆಗೆ ನಿಯೋಜಿಸಲಾಗಿತ್ತು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ತೆರೆದಿದ್ದವು. ಕೆಲಕಾಲ ಬ್ಯಾಂಕ್‌ ಸೇವೆ ಸ್ಥಗಿತಗೊಂಡಿತ್ತು. ಅಂಚೆ ಇಲಾಖೆ ನೌಕರರು ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ADVERTISEMENT

ಆರ್ಥಿಕ ಹಿಂಜರಿತದಿಂದ ಕಾರ್ಮಿಕರು ಸಾಕಷ್ಟು ಉದ್ಯೋಗ ಕಳೆದುಕೊಳ್ಳುತ್ತಿದ್ದು, ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ಕಾರ್ಮಿಕರ ಉದ್ಯೋಗ ಮತ್ತು ಆದಾಯಗಳ ರಕ್ಷಣೆ ಮಾಡಿ ಉದ್ಯೋಗ ಸೃಷ್ಟಿಸಬೇಕಾದ ಅವಶ್ಯಕತೆ ಇದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡಬೇಕು. ಶಾಸನಬದ್ಧ ಭವಿಷ್ಯನಿಧಿ ಮತ್ತು ಪಿಂಚಣಿ ನೀಡಬೇಕು. ದೇಶ ಹಲವು ಸಮಸ್ಯೆ ಎದುರಿಸುತ್ತಿದ್ದರೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ಜನರ ದಿಕ್ಕುತಪ್ಪಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮೀಣ ಮತ್ತು ನಗರದ ಎಲ್ಲಾ ಕುಟುಂಬಗಳನ್ನೊಳಗೊಂಡಂತೆ ಸಮರ್ಪಕ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತರಬೇಕು. ಗ್ರಾಮೀಣ ಪ್ರದೇಶದಲ್ಲಿನ ಜನರ ಸಂಕಷ್ಟ ನಿವಾರಿಸಲು ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ.ಸ್ವಾಮಿನಾಥನ್ ವರದಿ ಅನ್ವಯ ಬೆಂಬಲ ಬೆಲೆ ನಿಗದಿ ಮಾಡಬೇಕು. ಗುತ್ತಿಗೆ ಪದ್ಧತಿ ರದ್ದು ಮಾಡಿ ಕಾಯಂ ನೇಮಕಾತಿ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಮೈಷುಗರ್‌, ಪಿಎಸ್‌ಎಸ್‌ಕೆ ಕಾರ್ಖಾನೆಗಳ ಗುತ್ತಿಗೆ ಮತ್ತು ಖಾಸಗಿಕರಣ ಮಾಡದೆ ಸರ್ಕಾರವೇ ಕಾರ್ಖಾನೆ ಪ್ರಾರಂಭಿಸಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ರಕ್ಷಣೆ, ರೈಲ್ವೆ, ಬ್ಯಾಂಕ್‌, ವಿಮೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ಮತ್ತು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ನಿವೇಶನ ರಹಿತರಿಗೆ ಮನೆ ನಿವೇಶನ ನೀಡಬೇಕು. ಅಂಗವಿಕಲರ ಮಾಸಿಕ ಭತ್ಯೆ ಹೆಚ್ಚಿಸಬೇಕು. ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು.

ನೋಟು ರದ್ದತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವಕೀಲರು ಕೋರ್ಟ್‌ ಕಲಾಪಗಳಿಂದ ಹೊರಗುಳಿದು ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಚಂದ್ರಶೇಖರ್‌, ಸಿಪಿಎಂ ಜಿಲ್ಲಾ ಘಟಕದ ಪುಟ್ಟಮಾದು, ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲತಾ ಶಂಕರ್‌, ಚಂದ್ರಮ್ಮ, ಜಯಶೀಲಾ, ಮುಕ್ತರ್‌ ಅಹಮದ್‌, ಕರ್ನಾಟಕ ಪ್ರಾಂತ್ಯ ರೈತ ಸಂಘದ ಟಿ.ಎಲ್‌.ಕೃಷ್ಣೇಗೌಡ, ಚಿಕ್ಕೇಗೌಡ ಹುಸ್ಕೂರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.