ADVERTISEMENT

ಮಂಡ್ಯ ಜನ ಒರಟರಂತೆ ಕಂಡರೂ, ಸಹಾಯ ಸ್ಮರಿಸುವ ಹೃದಯವಂತರು: ಸಿ.ಎಂ. ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಮೇ 2025, 16:30 IST
Last Updated 8 ಮೇ 2025, 16:30 IST
<div class="paragraphs"><p>ಮಂಡ್ಯದ ಮೈಷುಗರ್‌ ಕಾರ್ಖಾನೆ ಆವರಣದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಂಚಿನ ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು. </p></div>

ಮಂಡ್ಯದ ಮೈಷುಗರ್‌ ಕಾರ್ಖಾನೆ ಆವರಣದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಂಚಿನ ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು.

   

ಮಂಡ್ಯ: ‘ಸಕ್ಕರೆ ನಗರ’ದ ಜನ ಒರಟರಂತೆ ಕಂಡರೂ, ಸಹಾಯ ಸ್ಮರಿಸುವ ಹೃದಯವಂತರು. ನಾಡಿಗೆ ಕೃಷಿ ಮೂಲಕ ಅನ್ನ ಕೊಡುವ ಅನ್ನದಾತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

‘ನೂತನ ಹಾಸ್ಟೆಲ್ ಕೇವಲ‌ ಕುರುಬರ ಮಕ್ಕಳಿಗೆ ಮಾತ್ರವಲ್ಲ, ಎಲ್ಲಾ ಜಾತಿಯ ಬಡವರಿಗೂ ಅವಕಾಶ ಇರುತ್ತದೆ ಎಂದರು. ದಾನಿಗಳು ಕೊಟ್ಟಷ್ಟು ಕೊಡಲಿ. ನಾನೂ ಸಹಾಯ ಮಾಡುತ್ತೇನೆ. ಮಂಡ್ಯದ ಜನ ಹತ್ತಾರು ವರ್ಷಗಳಿಂದ ನನಗೆ ಬಂಬಲ ಕೊಡುತ್ತಲೇ ಬರುತ್ತಿದ್ದಾರೆ’ ಎಂದರು.

ಮೈಷುಗರ್‌ ಕಾರ್ಖಾನೆ, ಕನ್ನಂಬಾಡಿ ಕಟ್ಟೆ ಸೇರಿದಂತೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ರಾಜ್ಯದ ಪ್ರಗತಿಗೆ ಹಲವಾರು ಕೊಡುಗೆ ನೀಡಿದ್ದಾರೆ. ಅವರನ್ನು ನಾವು ಸದಾ ಸ್ಮರಿಸಬೇಕು ಎಂದರು. 

₹50 ಕೋಟಿ ಅನುದಾನ:

ನಮ್ಮ ಸರ್ಕಾರ ಮೈಷುಗರ್ ಕಾರ್ಖಾನೆಗೆ ₹50 ಕೋಟಿ ಕೊಟ್ಟಿದ್ದಷ್ಟೇ ಅಲ್ಲ, ವಿದ್ಯುತ್ ಬಿಲ್ ಅಸಲು ಮತ್ತು ಬಡ್ಡಿ ಎರಡನ್ನೂ ಮನ್ನಾ ಮಾಡಿದೆ. ಇವತ್ತೇನಾದರೂ ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಉಳಿದಿದ್ದರೆ ಅದಕ್ಕೆ ಕಾಂಗ್ರೆಸ್‌ ಸರ್ಕಾರ ಕಾರಣ. ಮಂಡ್ಯ ಜಿಲ್ಲೆ ಅನ್ನದಾತರ ನಾಡು ಎಂಬುದನ್ನು ಪರಿಗಣಿಸಿ, ‘ಕೃಷಿ ವಿಶ್ವವಿದ್ಯಾನಿಲಯ’ವನ್ನು ಕೊಡುಗೆಯಾಗಿ ಕೊಟ್ಟಿದ್ದೇವೆ. ಕೃಷಿ ಸಚಿವ ಚಲುವರಾಯಸ್ವಾಮಿಯವರ ಕಾಳಜಿ, ಶ್ರಮ ಇದಕ್ಕೆ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಮಂಡ್ಯ ಜಿಲ್ಲೆಯ ನಾಲೆಗಳ ಅಭಿವೃದ್ಧಿಗೆ ಮತ್ತು ನೀರಾವರಿಗೆ ಹೆಚ್ಚು ಅನುದಾನ ನೀಡಿದ್ದೇನೆ. ₹13 ಕೋಟಿ ವೆಚ್ಚದ ಡಿಸಿಸಿ ಬ್ಯಾಂಕ್‌ ಆಡಳಿತ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ ಎಂದರು. 

ನಾನು ಮಂಡ್ಯದ ಹಾಸ್ಟೆಲ್ ಕಟ್ಟಡ ಶಿಥಿಲ ಆಗಿದ್ದನ್ನು ನೋಡಿದ್ದೆ. ಅನುದಾನ ಕೊಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದೆ. ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶ ಈಡೇರಬೇಕಾದರೆ ಹಾಸ್ಟೆಲ್ ಗಳ ಅಗತ್ಯವಿದೆ. ಹಳ್ಳಿಗಾಡಿನ ಮಕ್ಕಳೂ ವೈದ್ಯರು, ಎಂಜಿನಿಯರ್‌ಗಳಾಗಬೇಕು. ಕೇವಲ ಒಂದು ವರ್ಗದವರು ಮಾತ್ರ ಆಗಬಾರದು, ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದರು.

ಕಾಲ್ಗುಣದಿಂದ ಮಳೆ–ಬೆಳೆಯಾಗಿದೆ:

ಕಳೆದ ವರ್ಷ ಮಳೆ-ಬೆಳೆ ಚನ್ನಾಗಿ ಆಗಿದೆ. ಸಿದ್ದರಾಮಯ್ಯ ಅವರ ಕಾಲ್ಗುಣ ಸರಿ ಇಲ್ಲ ಎಂದು ಟೀಕಿಸುತ್ತಿದ್ದ ಬಿಜೆಪಿ-ಜೆಡಿಎಸ್ ನವರಿಗೆ ಮಳೆಯೇ ಉತ್ತರ ಕೊಟ್ಟಿದೆ. ಈ ವರ್ಷವೂ ಉತ್ತಮ ಮಳೆ ಬೆಳೆ ಆಗುವ ಭರವಸೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಎನ್‌.ಚಲುರಾಯಸ್ವಾಮಿ, ಭೈರತಿ ಸುರೇಶ್‌, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌ ಗಣಿಗ, ದಿನೇಶ್‌ ಗೂಳಿಗೌಡ, ಮಧು ಮಾದೇಗೌಡ, ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್‌, ಮರಿತಿಬ್ಬೇಗೌಡ, ಅಪ್ಪಾಜಿಗೌಡ, ಉದ್ಯಮಿ ನರಹರಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್‌, ಮುಖಂಡರಾದ ಚಿದಂಬರ್‌ ಎಂ.ಎಸ್‌., ಶ್ರೀನಿವಾಸ್‌, ಬಿ.ಎಸ್‌.ಶಿವಣ್ಣ, ಸಚಿನ್‌ ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಕುಮಾರ, ಸಿಇಒ ಕೆ.ಆರ್‌.ನಂದಿನಿ ಮುಂತಾದವರು ಪಾಲ್ಗೊಂಡಿದ್ದರು. 

ಮಂಡ್ಯ ಜಿಲ್ಲಾ ಕುರುಬರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೃಹತ್‌ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು. ಸಚಿವರಾದ ಎನ್‌. ಚಲುವರಾಯಸ್ವಾಮಿ ಭೈರತಿ ಸುರೇಶ್‌ ಶಾಸಕರಾದ ಪಿ.ರವಿಕುಮಾರ್‌ ಕಾಂಗ್ರೆಸ್‌ ಮತ್ತು ಕುರುಬ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು  –ಪ್ರಜಾವಾಣಿ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.