ADVERTISEMENT

ಮಳವಳ್ಳಿ : 8 ತಿಂಗಳ ಬಂಡೂರು ಟಗರು ₹1.48 ಲಕ್ಷಕ್ಕೆ ಬಿಕರಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 14:49 IST
Last Updated 2 ಫೆಬ್ರುವರಿ 2025, 14:49 IST
‘ಬಂಡೂರು’ ಟಗರು ಜೊತೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದ ಮನೋಹರ್ ಮತ್ತು ಉಲ್ಲಾಸ್ ಗೌಡ
‘ಬಂಡೂರು’ ಟಗರು ಜೊತೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದ ಮನೋಹರ್ ಮತ್ತು ಉಲ್ಲಾಸ್ ಗೌಡ   

ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕಿರುಗಾವಲು ಗ್ರಾಮದ ಯುವ ರೈತ ಉಲ್ಲಾಸ್ ಗೌಡ ಅವರು ಸಾಕಿದ್ದ ‘ಬಂಡೂರು’ ತಳಿಯ 8 ತಿಂಗಳ ಟಗರು ₹1.48 ಲಕ್ಷ ದಾಖಲೆ ಬೆಲೆಗೆ ಮಾರಾಟವಾಗಿದೆ.

ಉಲ್ಲಾಸ್ ಕೆಲ ತಿಂಗಳ ಹಿಂದೆ ಈ ಟಗರನ್ನು ₹50ಸಾವಿರಕ್ಕೆ ಖರೀದಿಸಿದ್ದರು. ಸದ್ಯ 20 ಕೆ.ಜಿ. ತೂಗುವ ಇದನ್ನು ಶಿವಮೊಗ್ಗದ ಜವಾದ್ ಎನ್ನುವವರು ಹೆಚ್ಚಿನ ಹಣ ನೀಡಿ ಕೊಂಡುಕೊಂಡಿದ್ದಾರೆ. ಟಗರಿಗೆ ವಿಶೇಷ ಪೂಜೆ ಮಾಡಿ ಮೆರವಣಿಗೆ ನಡೆಸಿದ ಕುಟುಂಬದವರು ಜವಾದ್ ಅವರಿಗೆ ಹಸ್ತಾಂತರಿಸಿದರು. ಅದನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದರು.

‘ಇಲ್ಲಿಂದಲೇ 30 ಕುರಿಗಳನ್ನು ಖರೀದಿಸಿದ್ದೇನೆ. ಈ ಟಗರಿನ ಮೂಲಕ ಬಂಡೂರು ತಳಿ ಅಭಿವೃದ್ಧಿಪಡಿಸುವ ಉದ್ದೇಶವಿದೆ’ ಎಂದು ಜವಾದ್ ತಿಳಿಸಿದರು.

ADVERTISEMENT

‘ಕುರಿ ಸಾಕಣೆ ನಮಗೆ ಜೀವನಾಧಾರವಾಗಿದೆ. ಕುರಿ  ಸಾಕುವುದನ್ನು ಕೀಳಾಗಿ ಕಾಣುವ ಸಮಾಜದಲ್ಲಿ, ಮಗ ಚಿಕ್ಕ ವಯಸ್ಸಿನಲ್ಲೇ ಓದಿನ ಜತೆಗೆ ಆದಾಯವನ್ನೂ ಗಳಿಸುತ್ತಿರುವುದು ಖುಷಿ ತಂದಿದೆ’ ಎಂದು ಉಲ್ಲಾಸ್ ಗೌಡ ಅವರ ತಂದೆ ಮನೋಹರ್ ಹೇಳಿದರು.

‘ಬಂಡೂರು ತಳಿ ಇತರ ಕುರಿಗಳಿಗಿಂತ ವಿಭಿನ್ನ. ಗಿಡ್ಡನೆಯ ಕಾಲು, ಉದ್ದವಾದ ದೇಹವನ್ನು ಹೊಂದಿರುತ್ತದೆ. ಈ ಮಾಂಸದ ಖಾದ್ಯ ಬಹಳ ರುಚಿಯಾಗಿರುತ್ತದೆ. ಈ ತಳಿಯ ಕುರಿಗಳು ಬೆರಳೆಣಿಕೆಯಷ್ಟು ಮಾತ್ರವೇ ಇವೆ. ಹಳ್ಳಿಗಳಲ್ಲಿ ಹುಡುಕುತ್ತಿರುತ್ತೇವೆ, ಸಿಕ್ಕಾಗ ತಂದು ಸಾಕುತ್ತಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.