ADVERTISEMENT

ಬಾಕಿ ಕೂಲಿ ಹಣ ನೀಡಲು ಆಗ್ರಹಿಸಿ ಸಂಸದೆ ಸುಮಲತಾಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 2:34 IST
Last Updated 28 ಡಿಸೆಂಬರ್ 2021, 2:34 IST
ಬಾಕಿ ಕೂಲಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಎದುರು ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬಾಕಿ ಕೂಲಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಎದುರು ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮಂಡ್ಯ: ಮೂರು ತಿಂಗಳಿಂದ ಉಳಿಸಿಕೊಂಡಿರುವ ಉದ್ಯೋಗ ಖಾತ್ರಿಯ ಬಾಕಿ ಕೂಲಿ ಹಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಎದುರು ಜಮಾಯಿಸಿದ ಕಾರ್ಯಕರ್ತರು ಬೇಡಿಕೆ ಈಡೇರಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಸ್ಥಳಕ್ಕಾಗಮಿಸಿದ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಮನವಿ ನೀಡಿದರು.

ಉದ್ಯೋಗ ಖಾತ್ರಿಯಡಿಯಲ್ಲಿ ಕೆಲಸ ನಿರ್ವಹಿಸಿದವರಿಗೆ ಕೂಲಿ ಹಣ ನೀಡಿಲ್ಲ. ಆನ್‌ಲೈನ್‌ ಹಾಜರಾತಿ ರದ್ದು ಮಾಡಬೇಕು. ಕಾಯಕ ಬಂಧುಗಳಿಗೆ ತರಬೇತಿ, ಗುರುತಿನ ಕಾರ್ಡ್‌ ಮತ್ತು ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಜೊತೆಗೆ 100 ದಿನ ಪೂರೈಸಿರುವ ಕುಟುಂಬಗಳಿಗೆ ಕೆಲಸ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರಯಾಣ ಭತ್ಯೆ, ಸಲಕರಣೆ ಖರ್ಚಿನ ದರ ಹೆಚ್ಚಿಸಬೇಕು. ಜಿಲ್ಲೆಯ ಮಳವಳ್ಳಿ, ಮಂಡ್ಯ, ಮದ್ದೂರು ಸೇರಿದಂತೆ ವಿವಿಧ ತಾಲ್ಲೂಕಿನಲ್ಲಿ ಕೆಲಸ ಮಾಡಿರುವ ಕುಟುಂಬಗಳಿಗೆ ಬಾಕಿ ಇರುವ ಕೂಲಿ ಹಣ ಬಿಡುಗಡೆ ಮಾಡಬೇಕು. ಉದ್ಯೋಗ ಖಾತ್ರಿಯ ಎಸ್ಟಿಮೇಟ್, ಎನ್ಎಂಆರ್ ಸೇರಿದಂತೆ ಇತರ ಮಾಹಿತಿಗಳನ್ನು ಕನ್ನಡದಲ್ಲೇ ಮುದ್ರಿಸಬೇಕು.ಸಾಮಗ್ರಿ ವೆಚ್ಚ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾಯಕ ಬಂಧುಗಳ ಪ್ರೋತ್ಸಾಹಧನ ₹ 20 ಲಕ್ಷ ಹಣವನ್ನು ಬಿಡುಗಡೆ ಮಾಡಬೇಕು. ಕೆಲಸದ ಸ್ಥಳದಲ್ಲಿಯೇ ಮೂರು ತಿಂಗಳಿಗೊಮ್ಮೆ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಬೇಕು. ಕಾಯ್ದೆಯ ನಿಯಮದಂತೆ ಪಂಚಾಯಿತಿ ಸಿಬ್ಬಂದಿ ಕಾಯಕ ಗುಂಪು ಮಾಡಿ ಕಾಯಕ ಸಂಘ ರಚಿಸಿ ಕಾಯಕ ಬಂಧುವನ್ನು ಆಯ್ಕೆ ಮಾಡಿ ಕೆಲಸ ನೀಡಬೇಕು. ಆದರೆ 13 ವರ್ಷಗಳಿಂದ ಇದುವರೆಗೂ ಯಾವುದೇ ಹಳ್ಳಿಗಳಲ್ಲಿ ನಿಯಮ ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾಧು, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಟಿ.ಯಶವಂತ, ಬಿ.ಎಂ.ಶಿವಮಲ್ಲಯ್ಯ, ಅಮಾಸಯ್ಯ, ರಾಜು, ಸುರೇಂದ್ರ, ಶಿವಮೂರ್ತಿ, ಎನ್‌.ಶಿವಕುಮಾರ್, ನಾಗರತ್ನ, ಟಿ.ಎಚ್‌.ಆನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.