ADVERTISEMENT

ಸ್ವಗ್ರಾಮದಲ್ಲಿ ನೆರವೇರಿದ ಯೋಧ ಲೋಕೇಶ್ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:05 IST
Last Updated 28 ಅಕ್ಟೋಬರ್ 2025, 4:05 IST
ನಾಗಮಂಗಲ ತಾಲ್ಲೂಕಿನ ಮೈಲಾರಪಟ್ಟಣದ ಜಮೀನಿನಲ್ಲಿ ಯೋಧ ಲೋಕೇಶ್‌ ಅವರ ಅಂತ್ಯಕ್ರಿಯೆ ನಡೆಯಿತು
ನಾಗಮಂಗಲ ತಾಲ್ಲೂಕಿನ ಮೈಲಾರಪಟ್ಟಣದ ಜಮೀನಿನಲ್ಲಿ ಯೋಧ ಲೋಕೇಶ್‌ ಅವರ ಅಂತ್ಯಕ್ರಿಯೆ ನಡೆಯಿತು   

ನಾಗಮಂಗಲ: ಪಂಜಾಬ್‌ನ ಪಠಾಣ್‌ಕೋಟ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತ ಹಾಗೂ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟಿದ್ದ ಯೋಧ ಲೋಕೇಶ್ (44) ಅಂತ್ಯಕ್ರಿಯೆ ಅವರ ಸ್ವಾಗ್ರಾಮ ತಾಲ್ಲೂಕಿನ ದೇವಲಾಪುರ ಹೋಬಳಿ ಮೈಲಾರಪಟ್ಟಣದಲ್ಲಿ ಸೋಮವಾರ ನೆರವೇರಿತು.

ಅ.24ರಂದು ಬೆಳಿಗ್ಗೆ 7ರ ಸುಮಾರಿಗೆ ‌ಹೃದಯಾಘಾತ ಹಾಗೂ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಕುಸಿದು ಬಿದ್ದ ಲೋಕೇಶ್ ಅವರನ್ನು ಗುರುದಾಸ್‌ಪುರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಮೃತಪಟ್ಟಿದ್ದರು.

ಅಮೃತ್ ಸರ್ ವಿಮಾನ ನಿಲ್ದಾಣದಿಂದ ಭಾನುವಾರ ರಾತ್ರಿ 10.30 ಗಂಟೆಯಲ್ಲಿ ವಿಶೇಷ ವಿಮಾನದಲ್ಲಿ ಲೋಕೇಶ್ ಅವರ ಪಾರ್ಥೀವ ಶರೀರವನ್ನು ಪುಣೆಯ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ಮತ್ತೊಂದು ವಿಶೇಷ ವಿಮಾನದಲ್ಲಿ ಸೋಮವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. 

ADVERTISEMENT

ಸಂಜೆ 4ರ ಸುಮಾರಿಗೆ ಬೆಂಗಳೂರಿನಿಂದ ಬಿಎಸ್‌ಎಫ್ ಯೋಧರನ್ನೊಳಗೊಂಡ ಸೇನಾ ವಾಹನದಲ್ಲಿ ಮೃತದೇಹ ನಾಗಮಂಗಲ ಪಟ್ಟಣ ಪ್ರವೇಶಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಮತ್ತು ಯುವಕರು ಮೃತದೇಹದ ದರ್ಶನ ಪಡೆಯುವುದರೊಂದಿಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಬೀಳ್ಕೊಟ್ಟರು. ಸ್ವಗ್ರಾಮ ಮೈಲಾರಪಟ್ಟಣದಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಗ್ರಾಮದ ಜಮೀನಿನಲ್ಲಿ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸುವ ಜೊತೆಗೆ ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಆದರ್ಶ ಅವರು ಸರ್ಕಾರಿ ಗೌರವ ಸಮರ್ಪಿಸಿದರು. ಅಂತ್ಯಕ್ರಿಯೆಯಲ್ಲಿ ಸಹಸ್ರಾರು ಸಾರ್ವಜನಿಕರು ಭಾಗವಹಿಸಿದ್ದರು.

ಲೋಕೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.