ADVERTISEMENT

ಶ್ರೀರಂಗಪಟ್ಟಣ |ಆಷಾಢ ಶುಕ್ರವಾರ: ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 13:15 IST
Last Updated 27 ಜೂನ್ 2025, 13:15 IST
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ, ಆಷಾಢ ಮಾಸದ ಮೊದಲನೇ ಶುಕ್ರವಾರದ ನಿಮಿತ್ತ ದೇವಿಗೆ ತೆಂಗಿನ ಗರಿ ಮತ್ತು ಎಳನೀರುಗಳಿಂದ ಕಲ್ಪವೃಕ್ಷ ಮಾತೆಯ ಅಲಂಕಾರ ಮಾಡಿ ಪೂಜಿಸಲಾಯಿತು
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ, ಆಷಾಢ ಮಾಸದ ಮೊದಲನೇ ಶುಕ್ರವಾರದ ನಿಮಿತ್ತ ದೇವಿಗೆ ತೆಂಗಿನ ಗರಿ ಮತ್ತು ಎಳನೀರುಗಳಿಂದ ಕಲ್ಪವೃಕ್ಷ ಮಾತೆಯ ಅಲಂಕಾರ ಮಾಡಿ ಪೂಜಿಸಲಾಯಿತು   

ಶ್ರೀರಂಗಪಟ್ಟಣ: ಆಷಾಢ ಮಾಸದ ಮೊದಲನೇ ಶುಕ್ರವಾರದ ನಿಮಿತ್ತ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಶಕ್ತಿ ದೇವಾಲಯಗಳಿಗೆ ಹೆಚ್ಚಿನ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪಟ್ಟಣದ ಚಾಮುಂಡೇಶ್ವರಿ ದೇವಾಲಯಕ್ಕೆ ಬೆಳಿಗ್ಗೆಯಿಂದಲೇ ಭಕ್ತರು ಆರಂಭಿಸಿದರು. ದೇವಿಗೆ ಲಿಂಬೆ ಹಣ್ಣು ಮತ್ತು ಬೆಲ್ಲದ ಆರತಿ ಬೆಳೆಗಿದರು. ದೇವಿಗೆ ತೆಂಗಿನ ಗರಿ ಮತ್ತು ಎಳನೀರುಗಳಿಂದ ಕಲ್ಪವೃಕ್ಷ ದೇವತೆಯ ಅಲಂಕಾರ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್‌. ಲಕ್ಷ್ಮೀಶ ಶರ್ಮಾ ಅವರ ನೇತೃತ್ವದಲ್ಲಿ ಮಂಗಳ ದ್ರವ್ಯ ಸಹಿತ ಫಲ ಪಂಚಾಮೃತ ಅಭಿಷೇಕ, ದುರ್ಗಾ ಸಪ್ತಸತಿ ಪಾರಾಯಣ, ಸಹಸ್ರನಾಮ, ಅಷ್ಟೋತ್ತರ ಪೂಜೆಗಳು ನಡೆದವು. ಪಟ್ಟಣ ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ದೇವಿಯ ದರ್ಶನ ಪಡೆದರು. ಪ್ರಸಾದ ವಿತರಣೆ ನಡೆಯಿತು.

ಮಹಾಕಾಳಿ ದೇಗುಲ: ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ದೇವಾಲಯದಲ್ಲಿ ದೇವಿಗೆ ಬಗೆ ಬಗೆಯ ಹಣ್ಣು ಮತ್ತು ಹೂಗಳಿಂದ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಗುರುದೇವ ಅವರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಅರ್ಚನೆ, ಹೋಮಗಳು ನಡೆದವು. ಮಂಡ್ಯ, ಮೈಸೂರು, ಬೆಂಗಳೂರು ಇತರ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು. ಪ್ರಸಾದ ವಿತರಿಸಲಾಯಿತು.

ADVERTISEMENT

ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯ, ಕ್ಷಣಾಂಬಿಕಾ ದೇಗುಲ, ಕಾಳಿಕಾಂಬ ದೇವಾಲಯ, ಓಂ ಶಕ್ತಿ ದೇವಾಲಯ, ಕೆ.ಶೆಟ್ಟಹಳ್ಳಿಯ ಮಾರಮ್ಮ ದೇವಾಲಯ ಇತರರೆಡೆ ಪೊಜೆ, ಪುನಸ್ಕಾರಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.