
ಪಾಂಡವಪುರ: ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಅಂಕೇಗೌಡರ ಪುಸ್ತಕದ ಮನೆಗೆ ಸೋಮವಾರ ಭೇಟಿ ನೀಡಿದ ಶಾಸಕ ಡಾ.ಸಿ.ಎನ್. ಅಶ್ವತ್ಥ್ ನಾರಾಯಣಗೌಡ ಅವರು ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡರನ್ನು ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ಪುಸ್ತಕ ಪ್ರೇಮಿ ಅಂಕೇಗೌಡರು ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿ ಜ್ಞಾನಕ್ಕೆ ಒತ್ತು ನೀಡಿದ್ದಾರೆ. ಸ್ಪಷ್ಟ ಗುರಿ, ಸಂದೇಶದಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ನಳಂದ ಮತ್ತು ತಕ್ಷಶಿಲೆ ರೀತಿಯಲ್ಲಿ ಈ ಗ್ರಂಥಾಲಯ ಬೆಳಸಬೇಕು ಎಂಬುದು ಅವರ ಉದ್ದೇಶವಾಗಿದೆ. ಕೇಂದ್ರ ಸರ್ಕಾರವು ಇವರ ಸಾಧನೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.
ಎಂ.ಅಂಕೇಗೌಡ ಮಾತನಾಡಿ, ಸತತ 50 ವರ್ಷಗಳ ಪರಿಶ್ರಮದಿಂದ ಪುಸ್ತಕ ಭಂಡಾರ ಮಾಡಿದ್ದೇನೆ. ಈ ಪುಸ್ತಕಾಲಯಕ್ಕೆ ಶಕ್ತಿ ತುಂಬಬೇಕಿದೆ. ಇದರ ಉಳಿವಿಗಾಗಿ ಎಲ್ಲರೂ ಸಹಕಾರ ನೀಡಬೇಕು. ನನ್ನ ಬದುಕೇ ಪುಸ್ತಕದ ಮನೆಯಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್, ಮುಖಂಡರಾದ ಉಮೇಶ್, ಧನಂಜಯ, ಟಿ.ಶ್ರೀಧರ್, ಎಚ್.ಎನ್.ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.