ADVERTISEMENT

ಹುಳು ಮಿಶ್ರಿತ ಆಹಾರ: ಪ್ರಶ್ನಿಸಿದ್ದಕ್ಕೆ ಹಲ್ಲೆ

ಚಿನಕುರಳಿಯ ಬಿಸಿಎಂ ಹಾಸ್ಟೆಲ್‌ನ ಮೂವರು ವಿದ್ಯಾರ್ಥಿಗಳಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 14:29 IST
Last Updated 21 ಜೂನ್ 2019, 14:29 IST

ಪಾಂಡವಪುರ: ತಾಲ್ಲೂಕಿನ ಚಿನಕುರಳಿ ಗ್ರಾಮದ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್‌ ನಂತರದ ಹಾಸ್ಟೆಲ್‌ನಲ್ಲಿ ಹುಳು ಮತ್ತು ಕಸಕಡ್ಡಿಗಳಿಂದ ಕೂಡಿದ ಆಹಾರ ನೀಡಲಾಗುತ್ತಿದೆ ಎಂದು ದೂರು ನೀಡಿದ ವಿದ್ಯಾರ್ಥಿಗಳ ಮೇಲೆ ಗುರುವಾರ ಸಂಜೆ ಹಲ್ಲೆ ನಡೆದಿದೆ.

ಹಲ್ಲೆಗೀಡಾದ ಶ್ರವಣಕುಮಾರ್‌, ಚಲುವರಾಜು, ಮನು ಅವರು ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

‘ಹಾಸ್ಟೆಲ್‌ ವಾರ್ಡನ್‌ ಶಿವರಾಜು, ಅಡುಗೆ ಭಟ್ಟ ನಂದೀಶ್, ಸಹಾಯಕರಾದ ಯಲ್ಲಪ್ಪ, ಕಿರಣ್‌ಕುಮಾರ್, ಪದ್ಮಮ್ಮ ಅವರು ಹೊರಗಿನ ವ್ಯಕ್ತಿಗಳ ಮೂಲಕ ಹಲ್ಲೆ ಮಾಡಿಸಿದ್ದಾರೆ’ ಎಂದು ಈ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ADVERTISEMENT

ಕಳಪೆ ಆಹಾರ ನೀಡುತ್ತಿರುವುದರ ಬಗ್ಗೆ, ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಗುರುವಾರ ಸಂಜೆ ಹಾಸ್ಟೆಲ್‌ಗೆ ನುಗ್ಗಿದ ಯುವಕರು ಶ್ರಾವಣಕುಮಾರ್, ಚಲುವರಾಜು, ಮನು ಮೇಲೆ ಕ್ರಿಕೆಟ್‌ ಬ್ಯಾಟ್‌ನಿಂದ ಮನಬಂದಂತೆ ಥಳಿಸಿದ್ದಾರೆ.

ಹಾಸ್ಟೆಲ್‌ಗೆ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಾಣಿ, ತಾಲ್ಲೂಕು ಅಧಿಕಾರಿ ಹರೀಶ್ ಭೇಟಿ ಪರಿಶೀಲಿಸಿದರು.

‌‘ಹಲ್ಲೆ ನಡೆಸಿದ ಯುವಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ ಹಾಸ್ಟೆಲ್‌ ವಾರ್ಡನ್‌ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್‌ಗೆ ಭದ್ರತಾ ಸಿಬ್ಬಂದಿ ನೇಮಿಸಬೇಕು’ ಎಂದು ಬಿಎಸ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.