ADVERTISEMENT

ಯಳಂದೂರು | ಅವರೆಕಾಯಿಗೆ ಕೀಟ ಬಾಧೆ: ರೈತ ಕಂಗಾಲು

ಯಳಂದೂರು ತಾಲ್ಲೂಕಿನಲ್ಲಿ ಮಳೆಯಿಂದಾಗಿ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 11:12 IST
Last Updated 4 ಡಿಸೆಂಬರ್ 2019, 11:12 IST
ಆಮೆಕೆರೆ ಬಳಿಯ ಅವರೆ ತಾಕಿನಲ್ಲಿ ಕಾಣಿಸಿಕೊಂಡ ರೋಗಬಾಧಿತ ಗಿಡಗಳು.
ಆಮೆಕೆರೆ ಬಳಿಯ ಅವರೆ ತಾಕಿನಲ್ಲಿ ಕಾಣಿಸಿಕೊಂಡ ರೋಗಬಾಧಿತ ಗಿಡಗಳು.   

ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಅವರೆ ತಾಕಿಗೆ ಹಸಿರುಳು ಮತ್ತು ಎಲೆಹಸಿರು ತಿನ್ನುವ ಹಸಿರು ಹುಳು ಬಾಧೆಯಿಂದ ಇಳುವರಿ ಕುಸಿದು ಕೃಷಿಕರು ಬಸವಳಿದಿದ್ದಾರೆ.

ಹವಾಮಾನದಲ್ಲಿ ಉಂಟಾದ ವ್ಯತ್ಯಾಸ ಮತ್ತು ಸೋನೆಮಳೆಗೆ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಅವರೆ ತಾಕು ರೋಗಕ್ಕೆ ಸಿಲಿಕಿದೆ. ಡಿಸೆಂಬರ್ ವೇಳೆಗೆ ಕಾಣಬರುತ್ತಿದ್ದ ಅವರೆ ಸೊಗಡು ಮಾಯವಾಗಿದೆ.

ಗೌಡಹಳ್ಳಿ, ಮರಪಾಳ್ಯ, ಹೊನ್ನೂರು, ಕೆಸ್ತೂರು, ದುಗ್ಗಹಟ್ಟಿ, ಚಾಮಲಪುರ, ಕೃಷ್ಣಪುರ ಸುತ್ತಮುತ್ತ ಹಲವೆಡೆ ಈ ಪೀಡೆ ಕಾಣಿಸಿಕೊಂಡಿದೆ.

ADVERTISEMENT
ಅವರೆಕಾಯಿ ಬಾಧಿಸುವ ಹುಳು

ಮುಂಗಾರು ಇಲ್ಲಿ ತಡವಾಗಿ ಆರಂಭಗೊಂಡಿತ್ತು. ಬೇಸಾಯಗಾರರು ಮಿಶ್ರ ಬೆಳೆಯಾಗಿ ಅವರೆಗೆ ಆದ್ಯತೆ ನೀಡಿದ್ದರು. ಹುರುಳಿ, ರಾಗಿ ಮತ್ತು ಜೋಳದ ತಾಕಿನಲ್ಲಿ ಅವರೆ ಗಿಡವು ಸೊಂಪಾಗಿ ಬೆಳೆದಿತ್ತು. ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಎಡೆಬಿಡದೆ ಸುರಿದ ಮಳೆಗೆ ಗಿಡದಲ್ಲಿ ಹೂ ಕಾಣಿಸಿಕೊಂಡಿತ್ತು.

ನವೆಂಬರ್‌ ಅಂತ್ಯದಲ್ಲಿ ಮೋಡ ಮುಚ್ಚಿದ ವಾತಾವರಣ ಮತ್ತು ತುಂತುರು ಮಳೆ ಸುರಿದ ನಂತರ ಕಾಯಿಕಟ್ಟುವ ಹಂತ ತಲುಪುತ್ತಿದ್ದಂತೆ ಗೊಂಚಲುಗಳ ನಡುವೆ ಪೊರೆ ಕಟ್ಟಿದ ಹುಳುಗಳು ಕಾಣಿಸಿಕೊಂಡವು. ತೂತು ಬಿದ್ದ ಎಲೆಗಳು ಗೋಚರಿಸಿತು. ಅಲ್ಲೊಂದು ಇಲ್ಲೊಂದು ಹಸಿರು ಕಂಬಳಿ ಹುಳು ಕಾಯಿ ಕೊರೆದು ಹೊರಬರಲು ತೊಡಗಿದವು. ಇದರಿಂದಾಗಿ ಕಾಯಿ ಸುರುಟಿಕೊಂಡು ಇಳುವರಿಗೆ ತೊಂದರೆಯಾಗಿದೆ.

‘ಮುಂಜಾನೆ ಹುಳುಗಳು ಎಲೆ ಮತ್ತು ಕಾಯಿ ಸುತ್ತ ಹರಿದಾಡುತ್ತವೆ. ಬಿಸಿಲು ಬರುತ್ತಲೇ ಗಿಡ ಮತ್ತು ಕಾಯಿಗಳ ನಡುವಿನ ನೆರಳು ಸೇರುತ್ತವೆ. ಗೂಡು ಕಟ್ಟಿ ಲಾರ್ವ ಸ್ಥಿತಿಯಲ್ಲಿ ಇದ್ದು, ನಂತರ ಹೊರಬಂದ ಹುಳುಗಳು ಎಲೆ ತಿನ್ನುತ್ತವೆ. ಈಗ ಹೊಲದಲ್ಲಿ ಎಲೆಗಳು ಪಂಜರದಂತೆ ತೂತುಬಿದ್ದು ಒಣಗುತ್ತಿವೆ. ನಂತರ ಉಳಿದ ಗಿಡಗಳತ್ತ ಹೋಗುತ್ತವೆ. ಹೂ ಮತ್ತು ಕಾಯಿಗಳು ಸರಿಯಾಗಿ ಕಟ್ಟದೆ ಒಣಗಿ ಹೋಗುತ್ತಿವೆ’ ಎನ್ನುತ್ತಾರೆ ದುಗ್ಗಹಟ್ಟಿ ಸುರೇಶ್.

ಅವರೆ ಕೊರೆಯುವ ಹುಳು

‘ಕಳೆದ 3 ವರ್ಷಗಳಿಂದ 2 ಎಕರೆ ಜಮೀನಿನಲ್ಲಿ ರಾಗಿ ಜೊತೆ ಅಕ್ಕಡಿ ಸಾಲಿನಲ್ಲಿ ಅವರೆ ಬಿತ್ತನೆ ಮಾಡಿದ್ದೆ. ಸುಮಾರು 10 ಸಾವಿರ ಖರ್ಚಾಗಿತ್ತು. ಈಗ ರಾಗಿ ಮತ್ತು ಅವರೆ ಬೆಳೆಗಳೂ ರೋಗ ಮತ್ತು ಕಳೆ ಗಿಡಗಳಿಂದ ಇಳುವರಿ ಕಳೆದುಕೊಂಡಿದೆ. ಡಿಸೆಂಬರ್ ಚಳಿಗೆ ಕಾಯಿ ಕೊಯ್ಲು ಮಾಡಬೇಕಿತ್ತು. ಆದರೆ, ಸರಿಯಾದ ಫಸಲು ಸಿಗುವ ಅನುಮಾನವಿದೆ. ಸಾಲ ತೀರಿಸುವುದೇ ಕಷ್ಟವಾಗಿದೆ’ ಎಂದು ರೈತ ಮಹಿಳೆ ಮರಪಾಳ್ಯದ ಜಯಮ್ಮ ಅಳಲು ತೋಡಿಕೊಂಡರು.

ನಿಯಂತ್ರಣ ಸಲಹೆ: ಹಸಿರು ಕೀಟ ಕಂಡುಬಂದಲ್ಲಿ 1 ಲೀಟರ್ ನೀರಿಗೆ ಅರ್ಧ ಎಂ.ಎಲ್ ಫೇಮ್ ಮಿಶ್ರಣವನ್ನು ಸೇರಿಸಿ ಸಿಂಪಡಿಸಬೇಕು. ಅಥವಾ 1 ಲೀಟರ್ ನೀರಿಗೆ ಅರ್ಧ ಗ್ರಾಂ ಪ್ರೋಕ್ಲೆಮ್‌ ಬೆರಸಿ ಸಿಂಪಡಿಸಬೇಕು ಎನ್ನುತ್ತಾರೆ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಕೀಟ ವಿಜ್ಞಾನಿ ಶಿವರಾಯನಾವಿ.

‘ಅವರೆ ಎಲೆ ತಿನ್ನುವ ರೋಗ ಕಂಡುಬಂದಿದ್ದರೆ 1ಲೀಟರ್ ನೀರಿಗೆ 2 ಎಂಎಲ್ ಕ್ಲೋರೋಫೈರಿಪಾಸ್, ಇಲ್ಲವೇ ಮಾನೋ ಕ್ರೋಟೋಪಾಸ್ಅನ್ನು ಮಿಶ್ರಣ ಮಾಡಿ ಬಿಸಿಲು ಇದ್ದಾಗ ಸಿಂಪಡಿಸಬೇಕು’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.