
ಪಾಂಡವಪುರ: ‘ರೈತರು ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಸುಗಳನ್ನು ಪ್ರೀತಿಯಿಂದ ಸಾಕಿ ಜಾತ್ರೆಗೆ ಕರೆತಂದಿದ್ದಾರೆ’ ಎಂದು ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ನಡೆದ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
‘ಯಾರು ದನ, ಕರುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರು ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ರೈತ ನಾಯಕ ದಿ. ಕೆ.ಎಸ್.ಪುಟ್ಟಣ್ಣಯ್ಯ ಆಗಾಗ್ಗೆ ಹೇಳುತ್ತಿದ್ದರು. ಅವರ ಮಾತು ನೂರಕ್ಕೆ ನೂರಷ್ಟು ಸತ್ಯವಾದುದು’ ಎಂದರು.
‘ಮೈಸೂರಿನ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1863ರಲ್ಲಿ ಇಲ್ಲಿನ ಬೇಬಿಬೆಟ್ಟದ ದನಗಳ ಜಾತ್ರೆ ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿವರೆಗೆ ಜಾತ್ರೆ ನಿರಂತರಾಗಿ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಸರು ಗಳಿಸುತ್ತಿದೆ’ ಎಂದು ಹೇಳಿದರು.
ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ‘ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಬಹುಮಾನ ಆಯ್ಕೆಯಲ್ಲಿ ನಮ್ಮ ಹಸ್ತಕ್ಷೇಪವಿಲ್ಲ, ಹಲವರು ಕರೆ ಮಾಡಿ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದ್ದರು. ಆದರೆ, ಉತ್ತಮ ರಾಸುಗಳ ಆಯ್ಕೆಯನ್ನು ಹೊರ ಜಿಲ್ಲೆಯ ಪಶುವೈದ್ಯಕೀಯ ತಜ್ಞ ವೈದ್ಯರ ತಂಡವು ಮಾಡಿದೆ. ಆಯ್ಕೆಯಲ್ಲಿ ಪಾರದರ್ಶಕ ಕಾಪಾಡಿಕೊಳ್ಳಲಾಗಿದೆ’ ಎಂದರು.
ತಾ.ಪಂ. ಇಒ ವೀಣಾ ಮಾತನಾಡಿದರು.
ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ, ಜಿ.ಪಂ.ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ವೈ.ಪಿ.ಮಂಜುನಾಥ್, ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ರಾಘವ ಪ್ರಕಾಶ್, ದೊಡ್ಡಿಘಟ್ಟ ಸುರೇಶ್, ಚಲುವರಸನಕೊಪ್ಪಲು ದರ್ಶನ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲಿಂಗರಾಜು ಇದ್ದರು.
ಉತ್ತಮ ರಾಸುಗಳಿಗೆ ಚಿನ್ನದ ನಾಣ್ಯ
ಜಾತ್ರೆಯಲ್ಲಿ 2 ಸಾವಿರಕ್ಕೂ ಹೆಚ್ಚು ರಾಸುಗಳು ಬಂದಿದ್ದವು. ಈ ಪೈಕಿ 92 ಜೋಡೆತ್ತುಗಳು ಹಾಗೂ 75 ಹಸುಗಳು ಬಹುಮಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದವು. ಅಂತಿಮವಾಗಿ ಹಲ್ಲಿಲ್ಲದ 2 4 6 8 ಹಲ್ಲಿನ ಜೋಡೆತ್ತುಗಳು ಹಸುಗಳು ಬೀಜದ ಹೋರಿಗಳಿಗೆ ಪ್ರತ್ಯೇಕವಾಗಿ 72 ಉತ್ತಮ ರಾಸುಗಳಿಗೆ 2 ರಿಂದ 3 ಗ್ರಾಂ. ಚಿನ್ನದ ನಾಣ್ಯ ಹಾಗೂ ಬಹುಮಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದ ಎಲ್ಲ 167 ರಾಸುಗಳ ಮಾಲೀಕರಿಗೆ ಸ್ಟೀಲ್ ಬಕೆಟ್ ನೀಡಿ ಗೌರವಿಸಲಾಯಿತು. ಉತ್ತಮವಾಗಿ ಎತ್ತುಗಳ ಕೊಂಬು ಒರೆಯವವರು ಲಾಳ ಕಟ್ಟುವವರು ಸೇರಿದಂತೆ 12 ರೈತರನ್ನು ಸನ್ಮಾನಿಸಲಾಯಿತು. ಜಾತ್ರೆಯಲ್ಲಿ ಭಾಗವಹಿಸಿದ್ದ ಜಾನುವಾರುಗಳ ಮಾಲೀಕರಿಗೆ ರೈತರಿಗೆ ಸಾರ್ವಜನಿಕರಿಗೆ 9 ದಿನ ರಾಮಯೋಗೀಶ್ವರ ಮಠದಿಂದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ನಿತ್ಯ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ತಿಂಡಿ ಊಟ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.