ADVERTISEMENT

ಬಲೂನ್‌ ಸ್ಫೋಟ: ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 14:10 IST
Last Updated 27 ಜೂನ್ 2018, 14:10 IST
ಶ್ರೀರಂಗಪಟ್ಟಣದಲ್ಲಿ ಮಾರ್ಚ್‌ 22ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಸ್ವಾಗತಕ್ಕೆ ಹಾರಿಬಿಡಲು ತಂದಿದ್ದ ಹೀಲಿಯಂ ತುಂಬಿದ್ದ ಬಲೂನ್‌ ಸ್ಫೋಟಗೊಂಡು ಗಾಯಗೊಂಡಿರುವ ಮಾದೇಶ ಅವರ ಮನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು
ಶ್ರೀರಂಗಪಟ್ಟಣದಲ್ಲಿ ಮಾರ್ಚ್‌ 22ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಸ್ವಾಗತಕ್ಕೆ ಹಾರಿಬಿಡಲು ತಂದಿದ್ದ ಹೀಲಿಯಂ ತುಂಬಿದ್ದ ಬಲೂನ್‌ ಸ್ಫೋಟಗೊಂಡು ಗಾಯಗೊಂಡಿರುವ ಮಾದೇಶ ಅವರ ಮನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು   

ಶ್ರೀರಂಗಪಟ್ಟಣ: ಮಾರ್ಚ್‌ 22ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಸ್ವಾಗತಕ್ಕಾಗಿ ಹಾರಿಬಿಡಲು ತಂದಿದ್ದ ಹೀಲಿಯಂ ಬಲೂನ್‌ ಸ್ಫೋಟಗೊಂಡು ಗಾಯಗೊಂಡಿರುವ ಇಲ್ಲಿನ ಕಾವೇರಿಪುರ ಬಡಾವಣೆಯ ಕುಮಾರ್‌ ಅವರ ಮಗ ಮಾದೇಶ ಮತ್ತು ಪ್ರಭು ಅವರ ಮಗ ರಾಹುಲ್‌ ಅವರ ಮನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬುಧವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಇಬ್ಬರೂ ಬಾಲಕರ ಪೋಷಕರಿಗೆ ತಲಾ ₹ 25 ಸಾವಿರ ವೈಯಕ್ತಿಕ ನೆರವು ನೀಡಿದರು. ಇಬ್ಬರೂ ಬಾಲಕರ ಮುಂದಿನ ಚಿಕಿತ್ಸೆಗೆ ಹಾಗೂ ಇದುವರೆಗೆ ಆಗಿರುವ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೊಡಿಸುವುದಾಗಿ ಅವರು ಭರವಸೆ ನೀಡಿದರು.

‘ಪ್ರತಿ ದಿನ ಈ ಮಕ್ಕಳ ಆರೋಗ್ಯ ಪರಿಶೀಲಿಸಿಬೇಕು. ಕಾಲ–ಕಾಲಕ್ಕೆ ಔಷಧ ನೀಡಲು ದಾದಿಯರನ್ನು ನಿಯೋಜಿಸಬೇಕು. ವೈದ್ಯರು ದಿನಕ್ಕೆ ಒಮ್ಮೆ ಭೇಟಿ ನೀಡಿ ಪರಿಸ್ಥಿತಿ ತಿಳಿಯಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್‌ ಹಾಗೂ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮಾರುತಿ ಅವರಿಗೆ ಸೂಚಿಸಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷದ ಪ್ರಚಾರದ ಉದ್ದೇಶದಿಂದ ಹಾಕಿದ್ದ ಹೀಲಿಯಂ ಬಲೂನ್‌ ಸ್ಫೋಟಗೊಂಡ ವೇಳೆ ಗಾಯಗೊಂಡ ಮಕ್ಕಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಆ ಪಕ್ಷದ ಮುಖಂಡರು ಭರವಸೆ ನೀಡಿದ್ದರು. ಈಗ ನಿರ್ಲಕ್ಷ್ಯ ಮಾಡಿದ್ದಾರೆ. ಬಡ ಮಕ್ಕಳ ಯೋಗಕ್ಷೇಮ ವಿಚಾರಿಸದೇ ನಿರ್ಲಕ್ಷಿಸಿದ್ದಾರೆ. ಬಡ ಕುಟುಂಬಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.