ADVERTISEMENT

ಬೆಟ್ಟಹಳ್ಳಿ ಲಕ್ಷ್ಮೀದೇವಿ ಜಾತ್ರೆಯ ಬಂಡಿ ಉತ್ಸವ

ಜೋಡೆತ್ತುಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 16:43 IST
Last Updated 31 ಮಾರ್ಚ್ 2021, 16:43 IST
ಪಾಂಡವಪುರ ತಾಲ್ಲೂಕಿನ ಕೆ.ಬೆಟ್ಟಹಳ್ಳಿ ಲಕ್ಷ್ಮಿದೇವಿ ಜಾತ್ರಾಮಹೋತ್ಸವದಲ್ಲಿ ಸೇರಿದ್ದ ಜನಸ್ತೋಮ
ಪಾಂಡವಪುರ ತಾಲ್ಲೂಕಿನ ಕೆ.ಬೆಟ್ಟಹಳ್ಳಿ ಲಕ್ಷ್ಮಿದೇವಿ ಜಾತ್ರಾಮಹೋತ್ಸವದಲ್ಲಿ ಸೇರಿದ್ದ ಜನಸ್ತೋಮ   

ಪಾಂಡವಪುರ: ತಾಲ್ಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋ ತ್ಸವದಲ್ಲಿ ಬಂಡಿ ಉತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು.

ಹಾರೋಹಳ್ಳಿ ಗ್ರಾಮದಿಂದ ಮಂಗಳವಾರ ರಾತ್ರಿ ಹೆಣ್ಣುಮಕ್ಕಳು ಹಣ್ಣಿನ ಬುಟ್ಟಿ ಹೊತ್ತು ಬಂಡಿಯ ಜೋಡೆತ್ತುಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಶಂಭೂನಹಳ್ಳಿಗೆ ಮೆರವಣಿಗೆ ಸಾಗಿತು.

ಬುಧವಾರ ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು ನಡೆದವು. ಶಂಭೂ ನಹಳ್ಳಿ ಬಂಡಿಗೆ ಹಾರೋಹಳ್ಳಿ ಜೋಡೆ ತ್ತುಗಳು, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಹುಲ್ಕೆರೆ ಗ್ರಾಮಗಳಿಂದ ಬಂಡಿಗಳಿಗೆ ಜೋಡೆತ್ತುಗಳನ್ನು ಕಟ್ಟಲಾಗಿತ್ತು. ಬಂಡಿಗಳನ್ನು ಬಿಳಿಪಂಚೆ, ಕಬ್ಬಿನ ಜೊಲ್ಲೆ, ಹೂಗಳಿಂದ ಶೃಂಗರಿಸಲಾಗಿತ್ತು.

ADVERTISEMENT

ಹರಕೆ ಹೊತ್ತವರು ಬಾಯಿಬೀಗ ಹಾಕಿ ಪೂಜೆ ಸಲ್ಲಿಸಿದರು. ಲಕ್ಷ್ಮೀದೇವಿ ಉತ್ಸವಕ್ಕೆ ಹಣ್ಣು, ಜವನ, ಹೂ ಎಸೆದು ಭಕ್ತಿ ಪ್ರದರ್ಶಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈರಮಕ್ಕಳು ಚಕ್ರಬಳೆ ಬಡಿದು ‘ತಾಯಿ ಲಕ್ಷ್ಮೀದೇವಿ ಒಲಿದುಬಾರೆ’ ಎಂದು ಹಾಡಿ ಕುಣಿದರು. ಹೆಣ್ಣು ದೇವರ ಗುಡ್ಡರು ಕನ್ನಂಕಾಡಿ ಹೊತ್ತು ಮೆರೆಸಿದರು.

ಬಿಳಿ ಕಚ್ಚೆ, ಕಪ್ಪುಕೋಟು, ಮೈಸೂರು ಪೇಟ ತೊಟ್ಟಿದ್ದ ದೇವರಗುಡ್ಡರು ಬೆತ್ತದ ಕೋಲು ಹಿಡಿದುಕೊಂಡು ಬಂಡಿಗಳನ್ನೇರಿ ಬಂಡಿ ಉತ್ಸವ ನಡೆಸಿದರೆ, ಬಂಡಿಯ ಜೋಡೆತ್ತುಗಳನ್ನು ಹತೋಟಿಗೆ ತರಲು ಕೆಲವರು ಎತ್ತುಗಳ ಹಗ್ಗ, ಮೂಗುದಾರ ಹಿಡಿದು ಬಂಡಿ ಉತ್ಸವ ನಡೆಸಿದರು.

ಹಾರೋಹಳ್ಳಿ, ಶಂಭೂನಹಳ್ಳಿ, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಹುಲ್ಕೆರೆ, ಹುಲ್ಕೆರೆಕೊಪ್ಪಲು, ಎಂ.ಬೆಟ್ಟಹಳ್ಳಿ, ಜಾಗಶೆಟ್ಟಹಳ್ಳಿ, ವಡ್ಡರಹಳ್ಳಿ, ಎಲೆಕೆರೆ, ಶ್ಯಾದನಹಳ್ಳಿ, ಹರವು, ಅರಳಕುಪ್ಪೆ ಸುತ್ತಮುತ್ತಲ ಗ್ರಾಮಗಳ ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಬಂಡಿ ಊರಿಗೆ ತೆರಳಿದ ಮೇಲೆ ಜಾತ್ರಾ ಮಹೋತ್ಸವ ಮುಕ್ತಾಯ ಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.