ADVERTISEMENT

ಮಳವಳ್ಳಿ | ₹1.35 ಲಕ್ಷಕ್ಕೆ ಬಂಡೂರು ಟಗರು ಮಾರಾಟ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:16 IST
Last Updated 18 ಜನವರಿ 2026, 5:16 IST
₹1.35 ಲಕ್ಷಕ್ಕೆ ಮಾರಾಟವಾದ ಬಂಡೂರು ತಳಿಯ 11 ತಿಂಗಳ ಟಗರು 
₹1.35 ಲಕ್ಷಕ್ಕೆ ಮಾರಾಟವಾದ ಬಂಡೂರು ತಳಿಯ 11 ತಿಂಗಳ ಟಗರು    

ಮಳವಳ್ಳಿ(ಮಂಡ್ಯ): ತಾಲ್ಲೂಕಿನ ಕಿರುಗಾವಲು ಗ್ರಾಮದ ಯುವ ರೈತ ಉಲ್ಲಾಸ್ ಗೌಡ ಸಾಕಿದ್ದ ಬಂಡೂರು ತಳಿಯ 11 ತಿಂಗಳ ಟಗರನ್ನು ₹1.35 ಲಕ್ಷಕ್ಕೆ ಬೆಂಗಳೂರಿನ ಎಂಜಿನಿಯರ್ ಹರೀಶ್ ಖರೀದಿ ಮಾಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ವಿದ್ಯಾಭ್ಯಾಸದೊಂದಿಗೆ ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಯುವ ರೈತ ಉಲ್ಲಾಸ್ ಗೌಡ ಕಳೆದ ವರ್ಷವೂ ಬಂಡೂರು ತಳಿಯ ಟಗರನ್ನು ₹1.48 ಲಕ್ಷಕ್ಕೆ ಮಾರಾಟ ಮಾಡಿ ಗಮನ ಸೆಳೆದಿದ್ದರು. ಕಳೆದ ಕೆಲ ತಿಂಗಳ ಹಿಂದೆ ಬೆಂಗಳೂರಿನಿಂದ ₹50 ಸಾವಿರ ನೀಡಿ ಉತ್ತಮವಾಗಿ ಸಾಕಿದ್ದರು. ಇದೀಗ ಟಗರು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ.

ಉತ್ತಮ ಪೋಷಣೆ, ತಳಿ ಶುದ್ಧತೆ ಹಾಗೂ ದೇಹದ ತೂಕದ ಕಾರಣದಿಂದ ವಿಶೇಷ ಗಮನ ಸೆಳೆದಿರುವ ಈ ಬಂಡೂರು ಟಗರನ್ನು ತಳಿ ಕುರಿಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಯ ಉದ್ದೇಶದಿಂದಲೇ ಹರೀಶ್ ಖರೀದಿಸಿದ್ದಾರೆ.

ADVERTISEMENT

‘ಈಗಾಗಲೇ 25 ಬಂಡೂರು ತಳಿ ಹೆಣ್ಣು ಕುರಿಗಳನ್ನು ಸಾಕುತ್ತಿದ್ದು, ಬಂಡೂರು ತಳಿ ಕುರಿಗಳು ಅಪರೂಪವಾಗುತ್ತಿದ್ದು, ಅವುಗಳ ಅಭಿವೃದ್ಧಿಗೆ ಈ ರೀತಿಯ ಪ್ರಯತ್ನಗಳು ಅಗತ್ಯ’ ಎಂದು ಹರೀಶ್ ಅಭಿಪ್ರಾಯಪಟ್ಟರು.

ಬಂಡೂರು ತಳಿ ಟಗರು ಉಳಿದ ಸಾಮಾನ್ಯ ಕುರಿಗಳಿಂದ ವಿಭಿನ್ನವಾಗಿ ಕಾಣಿಸುತ್ತದೆ. ನೋಡಲು ಅತ್ಯಂತ ಆಕರ್ಷಣೀಯವಾಗಿ ಸಾಮಾನ್ಯ ಕುರಿಗಿಂತ ಗಿಡ್ಡನೆಯ ಕಾಲು, ಉದ್ದವಾದ ದೇಹವನ್ನು ಹೊಂದಿದೆ. ಬಂಡೂರು ಕುರಿಯ ಮಾಂಸ ಸಾಮಾನ್ಯ ಕುರಿ ಹಾಗೂ ಮೇಕೆಗಳಿಗಿಂತ ಅತ್ಯುತ್ತಮ ರುಚಿ ನೀಡಲಿದೆ. ಮಾಂಸ ಮಾರಾಟ ತೀರ ಅಪರೂಪವಾಗಿದೆ. ಈ ತಳಿಯ ಕುರಿಗಳು ಇರುವುದು ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ರೈತ ಉಲ್ಲಾಸ್ ಗೌಡ ಅವರ ತಂದೆ ಮನೋಹರ್(ಮನು) ಗ್ರಾಮೀಣ ಭಾಗದಲ್ಲಿ ಹುಡುಕಿ ಬಂಡೂರು ತಳಿಯ ಕುರಿ ಮರಿಗಳನ್ನು ತಂದು ಸಾಕಾಣಿಕೆ ಮಾಡುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.