ಮಳವಳ್ಳಿ: 'ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಜಗದ ಜ್ಯೋತಿ ಬಸವಣ್ಣ ಅವರು ವಿಶ್ವದ ಬೆಳಕು' ಎಂದು ಮಡಿಕೇರಿಯ ಸಿ.ಐ.ಡಿ ಅರಣ್ಯ ಘಟಕದ ಡಿವೈಎಸ್‌ಪಿ ಆರ್.ಶಿವಕುಮಾರ ದಂಡಿನ ಬಣ್ಣಿಸಿದರು.
ವಿಶ್ವಗುರು ಕೋ ಆಪರೇಟಿವ್ ಸೊಸೈಟಿ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆಧ್ಯಾತ್ಮಿಕವಾಗಿ ವಿಶ್ವದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಬಸವಣ್ಣ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ಹಾಕಿಕೊಟ್ಟ ಅಡಿಪಾಯದಿಂದಲೇ ವಿಶ್ವದಲ್ಲಿ ಹಲವಾರು ಕ್ರಾಂತಿಗಳು ನಡೆದಿದೆ. 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಎಲ್ಲ ಸಮುದಾಯಗಳಿಗೆ ಸಮಾನತೆಯನ್ನು ಕಲ್ಪಿಸಿ ವಚನಗಳ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ತೊಲಗಿಸಲು ಮುಂದಾಗಿದ್ದರು’ ಎಂದು ಹೇಳಿದರು.
’ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಎಲ್ಲ ಕಾಲಕ್ಕೂ ನಮ್ಮ ಜೊತೆಯಲ್ಲಿ ಜೀವಂತವಾಗಿರುತ್ತಾರೆ. ಅವರ ಸಂದೇಶಗಳನ್ನು ಓದಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ವಚನಕಾರರು ನೆಲಮೂಲ ಸಂಸ್ಕೃತಿಯಿಂದ ಬಂದವರು ಆಗಿದ್ದಾರೆ. ಶ್ರಮಿಕರು, ಕೂಲಿಕಾರರು ಲಿಂಗಭೇದವಿಲ್ಲದೇ ನೋಡುವುದು ವಚನ ಸಾಹಿತ್ಯದಲ್ಲಿ ಮಾತ್ರ, ವಚನಗಳು ದಿನನಿತ್ಯದ ಕಲಿಕೆಯ ಸಾಧನವಾಗಿದೆ’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ, ‘ಬಸವ ಜಯಂತಿ ಸೇರಿದಂತೆ ಮಹನೀಯರ ಆಚರಣೆಗಳು ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳ್ಳದೇ ಅವರ ಚಿಂತನೆಗಳನ್ನು ಅನುಸರಿಸುವಂತಾಗಬೇಕು’ ಎಂದು ಹೇಳಿದರು.
‘ಬಸವಣ್ಣ ಅವರು ವಿಶ್ವಕ್ಕೆ ಗುರುವಾಗಿ ಸಮಾಜದ ಅಂಕು– ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಕೆಲವರ ಬಾಯಿಯಲ್ಲಿ ಬರೀ ವಚನಗಳನ್ನು ಹೇಳುತ್ತಾ ಹೊರಗಡೆ ಜಾತಿ ವ್ಯವಸ್ಥೆಯನ್ನು ತುಂಬಿಕೊಂಡಿರುತ್ತಾರೆ. ಹೀಗಾಗಿ ಜಯಂತಿಗಳು ಆಯಾ ಜಾತಿಗಳಿಗೆ ಸೀಮಿತವಾಗದೇ ಜಾತ್ಯತೀತವಾಗಿ ನಡೆಯಬೇಕು’ ಎಂದು ಆಶಿಸಿದರು.
ಸೊಸೈಟಿ ಅಧ್ಯಕ್ಷ ಎಂ.ಜಿ.ರಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್ ಪ್ರಕಾಶ್, ಮನ್‌ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಡಾ.ಬಿ.ಎಂ.ಮಾಲಾ ಅವರನ್ನು ಅಭಿನಂದಿಸಲಾಯಿತು.
ವಚನ ಕುಮಾರಸ್ವಾಮಿ, ರೂಪಾ ಅವರು ಬಸವಣ್ಣ ಅವರ ಬಗ್ಗೆ ಉಪನ್ಯಾಸ ನೀಡಿದರು.
ಉಪಾಧ್ಯಕ್ಷ ಸಿದ್ಧಲಿಂಗಸ್ವಾಮಿ, ಅಂತರರಾಷ್ಟ್ರೀಯ ಜಾನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಪ್ರಮುಖರಾದ ಎಂ.ವಿ.ಕೃಷ್ಣಶೆಟ್ಟಿ, ಗುರುಪ್ರಸಾದ್, ಟಿ.ಎಂ.ಪ್ರಕಾಶ್, ಎಂ.ಎಸ್.ದಯಾಶಂಕರ್, ಬಿ.ಮಹದೇವು, ಎಂ.ಎನ್.ಮಹೇಶ್ ಕುಮಾರ್, ಕೆವಿಟಿ ಕುಮಾರ್, ಚಂದ್ರಮ್ಮ, ರೂಪಾ ಮಹೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.