
ಶ್ರೀರಂಗಪಟ್ಟಣ: ಅವ್ಯವಸ್ಥೆಯ ಆಗರವಾಗಿದ್ದ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಪ್ರಯಾಣಿಕರ ತಂಗುದಾಣಕ್ಕೆ ಶ್ರೀರಂಗಪಟ್ಟಣ ರೋಟರಿ ಕ್ಲಬ್ ಸದಸ್ಯರು ಬುಧವಾರ ಕಾಯಕಲ್ಪ ನೀಡಿದರು.
ಬೆಂಗಳೂರು– ಮೈಸೂರು ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿರುವ ತಂಗುದಾಣದ ಒಳಗೆ ತ್ಯಾಜ್ಯ ಚೆಲ್ಲಾಡುತ್ತಿತ್ತು. ಮೇಲ್ಭಾಗದಲ್ಲಿ ಗಿಡಗಳು ಬೆಳೆಯುತ್ತಿದ್ದವು. ಒಳಗೆ ಮತ್ತು ಹೊರ ಭಾಗದಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಲಾಗಿತ್ತು. ಇಡೀ ತಂಗುದಾಣಕ್ಕೆ ಮಸಿ ಮೆತ್ತಿಕೊಂಡು ಬಣ್ಣಗೆಟ್ಟಿತ್ತು. ಇದನ್ನು ಗಮನಿಸಿದ ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ತಂಗುದಾಣವನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದರು. ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಕೂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
‘ಸುಮಾರು 20 ವರ್ಷಗಳ ಹಿಂದೆ ಈ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದು ನಿರ್ವಹಣೆ ಮಾಡದ ಕಾರಣ ಅವ್ಯವಸ್ಥೆಯ ಆಗರವಾಗಿತ್ತು. ಗಬ್ಬು ವಾಸನೆ ಮತ್ತು ತ್ಯಾಜ್ಯ ಚೆಲ್ಲಾಡುತ್ತಿದ್ದ ಕಾರಣ ಬಸ್‌ಗಳಿಗೆ ಕಾಯುವವರು ಮಳೆ, ಬಿಸಿಲೆನ್ನದೆ ರಸ್ತೆ ಬದಿಯಲ್ಲೇ ನಿಲ್ಲುತ್ತಿದ್ದರು. ಇದ್ದೂ ಇಲ್ಲದಂತಿದ್ದ ತಂಗುದಾಣವನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದಿದ್ದೇವೆ. ಇನ್ನು ಮುಂದಾದರೂ ಸ್ಥಳೀಯ ಗ್ರಾಮ ಪಂಚಾಯಿತಿ ಇದನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು’ ಎಂದು ರೋಟರಿ ಕ್ಲಬ್ ಅಧ್ಯಕ್ಷ ಆರ್. ರಾಘವೇಂದ್ರ ಮನವಿ ಮಾಡಿದರು.
ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಪಿ. ಮಂಜುರಾಂ ಪುಟ್ಟೇಗೌಡ, ಕಾರ್ಯದರ್ಶಿ ನಾಗೇಂದ್ರ, ಸಹ ಕಾರ್ಯದರ್ಶಿ ರಾಜೇಶ್, ಖಜಾಂಚಿ ಸರಸ್ವತಿ, ಸದಸ್ಯರಾದ ವಾಸು, ಸುರೇಶ್, ರೇವಣ್ಣ, ಗಾಯತ್ರಿ ಇದ್ದರು.