ADVERTISEMENT

ಭಾರತೀನಗರ |ಬೀದಿ ನಾಯಿಗಳ ಕಾಟ: ಸಾರ್ವಜನಿಕರಿಗೆ ಸಂಕಟ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 3:06 IST
Last Updated 15 ಅಕ್ಟೋಬರ್ 2025, 3:06 IST
ಭಾರತೀನಗರದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿರುವ ಬೀದಿನಾಯಿಗಳು
ಭಾರತೀನಗರದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿರುವ ಬೀದಿನಾಯಿಗಳು   

ಭಾರತೀನಗರ: ಭಾರತೀನಗರದಾದ್ಯಂತ ಬೀದಿ ನಾಯಿಗಳ ಆರ್ಭಟ ಹೆಚ್ಚಾಗಿದ್ದು, ಸಾರ್ವಜನಕರು ಸಂಕಟ ಅನುಭವಿಸುವಂತಾಗಿದೆ.

ಇಲ್ಲಿಯ ಮದ್ದೂರು-ಮಳವಳ್ಳಿ ಮುಖ್ಯ ಹೆದ್ದಾರಿ, ಮಂಡ್ಯ ರಸ್ತೆಯಲ್ಲಿ ಕೋಳಿ, ಹಂದಿ, ಮೇಕೆ ಮಾಂಸದ ಅಂಗಡಿಗಳು ಹೆಚ್ಚಿದ್ದು, ಇವುಗಳ ತ್ಯಾಜ್ಯದಿಂದಾಗಿ ನಾಯಿಗಳ ಸಂಖ್ಯೆಯೂ ಅಧಿಕವಾಗಿದೆ. ಮುಖ್ಯ ಹೆದ್ದಾರಿ, ಮಂಡ್ಯ ರಸ್ತೆ, ಹಲಗೂರು ರಸ್ತೆಯಲ್ಲಿ ಭಾರತೀ ಕಾಲೇಜಿಗೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು ಆಗಮಿಸುತ್ತಿದ್ದು, ನಾಯಿಗಳ ಉಪಟಳದಿಂದ ಬೇಸತ್ತಿದ್ದಾರೆ.

ನಾಯಿಗಳು ಒಂದೆಡೆಯಿರದೆ ಸಿಕ್ಕ ಕಡೆಯಲೆಲ್ಲಾ ಸಂಚರಿಸಿ, ಒಂದಕ್ಕೊಂದು ಕಚ್ಚಾಡಿ ಸಾರ್ವಜನಿಕರ ಮೇಲೆರಗುತ್ತಿವೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಹಲವು ಅಪಘಾತಗಳಾಗಿವೆ. ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ.

ADVERTISEMENT

ಈ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದಾರೆ.

ಭಾರತೀನಗರದ ಹಲಗೂರು ಮುಖ್ಯ ರಸ್ತೆಯಲ್ಲಿ ಯುವಕನ ಮೇಲೆ ದಾಳಿಗೆ ಮುಂದಾಗಿರುವ ಬೀದಿ ನಾಯಿಗಳು

‘ಪ್ರಾಣಿ ದಯಾ ಸಂಘ ಸೇರದಂತೆ ಹಲವು ಸಂಘಟನೆಗಳು ನಾಯಿಗಳನ್ನು ಕೊಲ್ಲಬಾರದು, ಅವುಗಳನ್ನು ಹಿಂಸಿಸಬಾರದು ಎಂದು ಹೇಳಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ’ ಎಂದು ತಿಳಿಸಿದ್ದಾರೆ.

ಸುನಿಲ್‌ಕುಮಾರ್‌ 
ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ ಬೇರೆಡೆಗೆ ಸ್ಥಳಾಂತರಿಸುವ ಕೆಲಸವಾಗಭೇಕು. ಹಾಗಾದರೆ ಸಾರ್ವಜನಿಕರು ನಿರುಮ್ಮಳವಾಗಿ ಓಡಾಡಬಹುದು. ‌
ಸುನಿಲ್‌ಕುಮಾರ್‌ ಎ.ಎಂ ಮಾಲೀಕರು ಮಹದೇಶ್ವರ ಫರ್ಟಿಲೈಸರ್ಸ್‌
ನಾಯಿಗಳನ್ನು ಹಿಡಿಯುವುದು ಕಾನೂನುಬಾಹಿರ ಕ್ರಮವಾಗಿದ್ದು ಇದರಿಂದ ಹತೋಟಿ ಕಷ್ಟ ಸಾಧ್ಯವಾಗಿದೆ. ಇದಲ್ಲದೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡುವ ನಿಪುಣ ಪೌರಕಾರ್ಮಿಕರು ಸಿಬ್ಬಂದಿ ಇಲ್ಲದಿರುವುದರಿಂದ ಅದೂ ಕೂಡ ಸಾಧ್ಯವಾಗುತ್ತಿಲ್ಲ
ಎನ್‌.ಸುಧಾ ಪಿಡಿಒ ಭಾರತೀನಗರ ಗ್ರಾ.ಪಂ.

ಮೂವರ ಮೇಲೆ ಬೀದಿ ನಾಯಿಗಳ ದಾಳಿ

ಶ್ರೀರಂಗಪಟ್ಟಣ: ಟೌನ್‌ ವ್ಯಾಪ್ತಿಯ ಗಂಜಾಂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಬೀದಿ ನಾಯಿಗಳು ದಾಳಿಯಿಂದ ಮೂವರು ಗಾಯಗೊಂಡಿದ್ದಾರೆ.

ಗಂಜಾಂನ ಆರ್ಕಾಟ್‌ ಬೀದಿ ನಿವಾಸಿ ನೇತ್ರಾವತಿ ಅವರ ಮೇಲೆ, ಗಂಜಾಂ ಮುಖ್ಯ ರಸ್ತೆಯಲ್ಲಿ ಸೋಮವಾರ ರಾತ್ರಿ ಬೀದಿ ನಾಯಿ ದಾಳಿ ನಡೆಸಿದೆ. ನೇತ್ರಾವತಿ ಅವರ ಕಾಲಿನ ಮಾಂಸ ಖಂಡ ಕಿತ್ತು ಬಂದಿದೆ.

ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ ಸಿದ್ದಪ್ಪಾಜಿ ಅವರ ಮೇಲೆ ಸೋಮವಾರ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದೆ. ಪಟ್ಟಣದ ನಿವಾಸಿ ಚೇತನ್‌ ಎಂಬ ಬಾಲಕ ಮೇಲೆ ಸೋಮವಾರ ಸಂಜೆ ಬೀದಿ ನಾಯಿ ದಾಳಿ ನಡೆಸಿದೆ. ಮೂವರೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

‘ನಾಯಿ ಕಚ್ಚಿದ ಪ್ರಕರಣಗಳು ಪ್ರತಿ ದಿನ ಬೆಳಕಿಗೆ ಬರುತ್ತಿವೆ. ಸೋಮವಾರ ಮೂರು ಪ್ರಕರಣಗಳು ನಡೆದಿವೆ. ಬಿಪಿಎಲ್‌ ಪಡಿತರ ಚೀಟಿ ಉಳ್ಳವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಎಪಿಎಲ್‌ ಪಟ್ಟಿಯಲ್ಲಿ ಇರುವವರಿಗೆ ಲಸಿಕೆ ನೀಡಲು ಕನಿಷ್ಠ ದರ ನಿಗದಿಪಡಿಸಲಾಗಿದೆ. ನಾಯಿ ಕಚ್ಚಿದ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎನ್‌.ವಿಜಯಲಕ್ಷ್ಮಿ ತಿಳಿಸಿದ್ದಾರೆ.