ADVERTISEMENT

ಶ್ರೀರಂಗಪಟ್ಟಣ | ಭೀಮನ ಅಮಾವಾಸ್ಯೆ: ಆರತಿ ಉಕ್ಕಡದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:19 IST
Last Updated 25 ಜುಲೈ 2025, 2:19 IST
ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ದೇವಾಲಯದಲ್ಲಿ, ಭೀಮನ ಅಮಾವಾಸ್ಯೆ ನಿಮಿತ್ತ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು (ಎಡಚಿತ್ರ). ಶ್ಭೀಮನ ಅಮಾವಾಸ್ಯೆ ನಿಮಿತ್ತ ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯದಲ್ಲಿ ಗುರುವಾರ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು
ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ದೇವಾಲಯದಲ್ಲಿ, ಭೀಮನ ಅಮಾವಾಸ್ಯೆ ನಿಮಿತ್ತ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು (ಎಡಚಿತ್ರ). ಶ್ಭೀಮನ ಅಮಾವಾಸ್ಯೆ ನಿಮಿತ್ತ ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯದಲ್ಲಿ ಗುರುವಾರ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು   

ಶ್ರೀರಂಗಪಟ್ಟಣ: ಭೀಮನ ಅಮಾವಾಸ್ಯೆ ನಿಮಿತ್ತ ತಾಲ್ಲೂಕಿನ ಆರತಿ ಉಕ್ಕಡದ ಪ್ರಸಿದ್ಧ ಅಹಲ್ಯಾದೇವಿ ಮಾರಮ್ಮನ ದೇವಾಲಯಕ್ಕೆ ಗುರುವಾರ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಮುಂಜಾನೆ 2ರಿಂದಲೇ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಬೆಳಿಗ್ಗೆ 7ರವೇಳೆಗೆ ದೇವಾಲಯದ ಮುಂದೆ ಜನ ಜಾತ್ರೆಯೇ ಸೇರಿತ್ತು. ದೇವಾಲಯದಿಂದ ಪರ್ಲಾಂಗು ದೂರದ ವರೆಗೂ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಮೇಲಿಂದ ಮೇಲೆ ನೂಕು ನುಗ್ಗಲು ಉಂಟಾಯಿತು. ಬ್ಯಾರಿಕೇಡ್‌ಗಳನ್ನು ಹಾಕಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಜಿನುಗುವ ಮಳೆಯಲ್ಲೂ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವಿಯ ದರ್ಶನ ಪಡೆದರು. ಅಹಲ್ಯಾದೇವಿ ಮಾರಮ್ಮನಿಗೆ ಬಗೆ ಬಗೆಯ ಹೂವು ಮತ್ತು ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಅರ್ಚನೆ, ಅಭಿಷೇಕಗಳು ನಿರಂತರವಾಗಿ
ನಡೆದವು. ದೇವಾಲಯದ ಪಕ್ಕದ ಐತಿಹಾಸಿಕ ಕಲ್ಯಾಣಿಯಲ್ಲಿ ‘ಕಟ್ಟೆ’ ಒಡೆಯುವ, ‘ತಡೆ’ ಒಡೆಯುವ ಮತ್ತು ‘ಮೊಟ್ಟೆ’ ಒಡೆಯುವ ಸಾಂಪ್ರದಾಯಿಕ ಆಚರಣೆಗಳು ನಡೆದವು. ವಿವಿಧೆಡೆಗಳಿಂದ
ಆಗಮಿಸಿದ್ದ ಭಕ್ತರು ದೇವಾಲಯದ ಸುತ್ತ ಎಳ್ಳು ಮತ್ತು ಜೀರಿಗೆ ಸಮರ್ಪಿಸಿ ಹರಕೆ ತೀರಿಸಿದರು.

ADVERTISEMENT
ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ನಿಮಿತ್ತ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು

ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಂಗಪಟ್ಟಣ– ಕೆ.ಆರ್‌. ಪೇಟೆ ರಸ್ತೆಯ ತಿರುವಿನಿಂದ ಕ್ಯಾತನಹಳ್ಳಿ ಸಂಪರ್ಕ ರಸ್ತೆವರೆಗೆ ಪೊಲೀಸ್‌ ಬಂದೋ ಬಸ್ತ್‌ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಹಾಸನ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು.

 ಚಾಮುಂಡೇಶ್ವರಿ ದೇವಾಲಯ: ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ, ಜ್ಯೋತಿರ್ಭೀಮನ ಅಮಾವಾಸ್ಯೆ ನಿಮಿತ್ತ ಗುರುವಾರ ವಿಶೇಷ ಪೂಜೆಗಳು ನಡೆದವು. ದೇವಿಗೆ ಬೆಣ್ಣೆಯಿಂದ ಶಾರದಾದೇವಿಯ ಅಲಂಕಾರ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್‌. ಲಕ್ಷ್ಮೀಶಶರ್ಮಾ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಪಟ್ಟಣ ಹಾಗೂ ಆಸುಪಾಸಿನ ಗ್ರಾಮಗಳ ನೂರಾರ ಭಕ್ತರು ದೇವಿಯ ದರ್ಶನ ಪಡೆದರು.

ಪಟ್ಟಣದ ಕ್ಷಣಾಂಬಿಕಾ ದೇವಾಲಯ, ಮಹಾಲಕ್ಷ್ಮಿ ದೇವಾಲಯ, ತಾಲ್ಲೂಕಿನ ಚಂದಗಾಲು ಗ್ರಾಮದ ಚಾಮುಂಡೇಶ್ವರಿ ದೇವಾಲಯ, ಕೂಡಲಕುಪ್ಪೆ ಗ್ರಾಮದ ಶಕ್ತಿ ಶನೇಶ್ವರಸ್ವಾಮಿ ದೇವಾಲಯಗಳಲ್ಲಿ ಕೂಡ ವಿಶೇಷ ಪೂಜೆಗಳು ನಡೆದವು.

ಮಹಾಕಾಳಿ ದೇವಾಲಯದಲ್ಲಿ ವಿಶೇಷ ಅಲಂಕಾರ

ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ದೇವಾಲಯಕ್ಕೆ ಜ್ಯೋತಿರ್ಭೀಮನ ಅಮಾವಾಸ್ಯೆ ನಿಮಿತ್ತ ಗುರುವಾರ ಹೆಚ್ಚಿನ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ದೇವಾಲಯದ ಪ್ರಧಾನ ಅರ್ಚಕ ಮೋಹನ್‌ ಗುರೂಜಿ (ಗುರುದೇವ) ಅವರ ನೇತೃತ್ವದಲ್ಲಿ ಅಭಿಷೇಕ ಅರ್ಚನೆಗಳು ನಡೆದವು. ದೇವಿಗೆ ನೀಲವರ್ಣದ ಅಲಂಕಾರ ಮಾಡಿದ್ದುದು ಗಮನ ಸೆಳೆಯಿತು. ಮುಂಜಾನೆಯಿಂದಲೇ ಭಕ್ತರು ದೇವಾಲಯಕ್ಕೆ ಬರಲಾರಂಭಿಸಿದರು. ಇಳಿ ಸಂಜೆಯಲ್ಲೂ ದೇವಾಲಯದ ಆವರಣ ಭಕ್ತರಿಂದ ತುಂಬಿತ್ತು.

ಲೋಕ ಕಲ್ಯಾಣಕ್ಕಾಗಿ ಪ್ರತ್ಯಂಗೀರ ಹೋಮವನ್ನು ಏರ್ಪಡಿಸಲಾಗಿತ್ತು. ಹರಕೆ ಹೊತ್ತವರು ಪಕ್ಕದ ಕಾಲುವೆ ಏರಿಯ ಮೇಲೆ ‘ತಡೆ’ ಒಡೆಯುವ ಆಚರಣೆಯಲ್ಲಿ ಪಾಲ್ಗೊಂಡರು. ಮಹಿಳಾ ಭಕ್ತರು ದೇವಿಗೆ ತೆಂಗಿನ ಕಾಯಿ ಬೆಲ್ಲ ಮತ್ತು ಅಕ್ಕಿ ಸಮರ್ಪಿಸಿ ನಿಂಬೆ ಹಣ್ಣು ಮತ್ತು ಬೂದುಗುಂಬಳದ ಆರತಿ ಬೆಳಗಿದರು. ಪ್ರಸಾದ ವಿತರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.