ಮಂಡ್ಯ: ರಾಜ್ಯದ ಕೆಲವು ಭಾಗಗಳಲ್ಲಿ ಹಕ್ಕಿಜ್ವರ ವರದಿಯಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ. ಕೋಳಿ ಸಾಕಾಣಿಕೆದಾರರು ಹಕ್ಕಿ ಜ್ವರ ಹರಡದಂತೆ ಪಶುಸಂಗೋಪನಾ ಇಲಾಖೆ ಅವರು ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಕೋಳಿ ಜ್ವರ ನಿಯಂತ್ರಣ ಸಂಬಂಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಳಿ ಶೀತ ಜ್ವರ ತಗುಲಿದ ಪಕ್ಷಿಯ ಶ್ವಾಸೇಂದ್ರಿಯ, ಕಣ್ಣಿನ ಕೊಡ್ಪರೆ ಮತ್ತು ಹಿಕ್ಕೆಗಳಿಂದ ವೈರಸ್ ಅನ್ನು ಹೊರಹಾಕುತ್ತದೆ. ಇದರಿಂದ ಒಂದು ಪಕ್ಷಿಯಿಂದ ಇನ್ನೊಂದು ಪಕ್ಷಿಗೆ ರೋಗ ಹರಡುತ್ತದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಣೆಯಲ್ಲಿರುವ 420 (ಮಾಂಸದ) ಬಾಯ್ಲರ್ ಕೋಳಿ ಫಾರಂಗಳಲ್ಲಿ- 25,19,050 ಕೋಳಿಗಳು ಹಾಗೂ 23 ಮೊಟ್ಟೆ ಕೋಳಿ ಫಾರಂಗಳಲ್ಲಿ- 5,26,500, ಮನೆಯಲ್ಲಿ ಸಾಕುವ ಕೋಳಿಗಳು-5,99,333 ಕೋಳಿಗಳು ಇರುತ್ತವೆ. ಇವುಗಳ ಬಗ್ಗೆ ಆಯಾ ತಾಲ್ಲೂಕಿನಲ್ಲಿ ನಿಗಾ ವಹಿಸಲು ತಂಡ ರಚಿಸಿ ಎಂದರು.
ಇದಲ್ಲದೇ ಸಾಕಾಣಿಕೆಯ ವಿಭಾಗಕ್ಕೆ ಬಾರದೇ ಇರುವ ಕಾಡು ಪಕ್ಷಿಗಳು, ಕೆರೆ ಕಟ್ಟೆ ಪಕ್ಷಿಧಾಮದ ಬಳಿ ವಾಸಿಸುವ ಪಕ್ಷಿಗಳಲ್ಲಿ ರೋಗದ ಲಕ್ಷಣ ಅಥವಾ ಕೋಳಿ ಜ್ವರ ಕಂಡು ಬಂದಲ್ಲಿ ತಕ್ಷಣ ಕ್ರಮವಹಿಸಲು ತಂಡಗಳನ್ನು ರಚಿಸಿ ಎಂದರು.
ಸೋಂಕಿತ ವಲಯದಲ್ಲಿ ಯಾವುದೇ ಪಕ್ಷಿಗಳು ಇರದಂತೆ ಹಾಗೂ ಬಾರದಂತೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ವಿಶೇಷ ತಂಡಗಳನ್ನು ರಚಿಸಿ, ಜಿಲ್ಲೆಯ ಎಲ್ಲಾ ಕೋಳಿ ಫಾರಂ ವಿವರಗಳನ್ನು ತೆಗೆದುಕೊಳ್ಳಲಾಗಿದೆ. ಕೋಳಿಗಳು ಅನುಮಾನಾಸ್ಪದವಾಗಿ ಸತ್ತು ಹೋದರೆ ಫಾರಂ ಮಾಲೀಕರು ಕೂಡಲೇ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಕೆ. ಮೋಹನ್, ಪಶುವೈದ್ಯಾಧಿಕಾರಿ ಡಾ.ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
Cut-off box - ‘ಕೋಳಿ ಮಾಂಸ: ಚೆನ್ನಾಗಿ ಬೇಯಿಸಿ ತಿನ್ನಿ’ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು ಎಂದು ತಿಳಿಸಿದರು. ಕೋಳಿ ಫಾರಂನಲ್ಲಿ ಕೆಲಸ ನಿರ್ವಹಿಸುವವರು ಕೆಲಸಗಾರರು ಕೋಳಿಗಳ ಜೊತೆ ನಿಕಟ ಸಂಪರ್ಕದಲ್ಲಿರುತ್ತಾರೆ. ಅವರಿಗೆ ಕೋಳಿ ಜ್ವರದ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು. ಜಿಲ್ಲೆಯಲ್ಲಿ ಯಾವುದೇ ಕೋಳಿ ಜ್ವರ ಪ್ರಕರಣಗಳು ದಾಖಲಾದರೆ ಅವುಗಳನ್ನು ವೈಜ್ಞಾನಿಕ ವಿಧಾನದಿಂದ ಮಣ್ಣು ಮಾಡುವುದಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೋಳಿಜ್ವರ ಪತ್ತೆಯಾದ ಜಾಗದಿಂದ 1 ಕಿ.ಮೀ ವ್ಯಾಪ್ತಿಯನ್ನು ‘ಸೋಂಕಿತ ವಲಯ’ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.