ADVERTISEMENT

ಜನನ, ಮರಣ ಪ್ರಮಾಣಪತ್ರ; ಅರಿವು ಮೂಡಿಸಿ: ಜಿಲ್ಲಾಧಿಕಾರಿ ಕುಮಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:49 IST
Last Updated 9 ಡಿಸೆಂಬರ್ 2025, 2:49 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು   

ಮಂಡ್ಯ: ‘ಗ್ರಾಮೀಣ ಪ್ರದೇಶದ ಜನರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರದ ಕುರಿತು ಅರಿವು ಇರುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆ, ಜಿಲ್ಲಾ ಮಟ್ಟದ ಬೆಳೆ ಕಟಾವು ಪ್ರಯೋಗ ಹಾಗೂ ಕೃಷಿ ಅಂಕಿ ಅಂಶ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜನನ ಪತ್ರ ನೀಡಲು ಆಸ್ಪತ್ರೆಗಳಲ್ಲಿ ವಿಳಂಬವಾಗುತ್ತಿದೆ. ಸದರಿ ವರ್ಷ ಜಿಲ್ಲೆಯಲ್ಲಿ 1 ವರ್ಷ ಮೇಲ್ಪಟ್ಟ 30 ಮಕ್ಕಳಿಗೆ ಜನನ ಪ್ರಮಾಣ ಪತ್ರ ನೊಂದಣಿ ಆಗಿಲ್ಲ. ಯಾವುದೇ ಕಾರಣಕ್ಕೂ ಜನನ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗಬಾರದು, ಜನನ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಮಗುವಿನ ತಂದೆ ತಾಯಿ ಹೆಸರು ಹಾಗೂ ವಿಳಾಸವನ್ನು ಖಾತ್ರಿ ಪಡಿಸಿಕೊಂಡು ನೋಂದಣಿ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ರೈತರು ಮಿಶ್ರ ಬೆಳೆ ಮತ್ತು ಪರ್ಯಾಯ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಿಶ್ರಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ರೈತರಿಗೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅರಿವು ಮೂಡಿಸಬೇಕು. ಜಿಲ್ಲೆಯ ರೈತರು ಸಾಂಪ್ರದಾಯಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸಾಂಪ್ರದಾಯಕ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸಿ’ ಎಂದು ಸೂಚಿಸಿದರು.

ಈಗಾಗಲೇ ಬೆಳೆ ಸಮೀಕ್ಷೆ ನಡೆಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆಯ ಮಾಹಿತಿಯನ್ನು ತಪ್ಪಾಗಿ ನಮೂದಿಸಲಾಗಿದೆ. ಅಧಿಕಾರಿಗಳು ಸಭೆ ನಡೆಸಿ ತಪ್ಪಾಗಿರುವ ಮಾಹಿತಿಯನ್ನು ತತ್ರಾಂಶದಿಂದ ತೆಗೆದುಹಾಕಬೇಕು. ಜೊತೆಗೆ ಬೆಳೆ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ಸಲ್ಲಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಭತ್ತ ಮತ್ತು ರಾಗಿ ಬೆಳೆ ಕಟಾವಿನ ವಿಚಾರದಲ್ಲಿ ದಲ್ಲಾಳಿಗಳು ಬೆಕಾಬಿಟ್ಟಿ ದರ ನಿಗದಿ ಪಡಿಸಿ ರೈತರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ, ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಿ ಭತ್ತ ಮತ್ತು ರಾಗಿ ಕಟಾವಿಗೆ ಸೂಕ್ತ ದರ ನಿಗದಿಪಡಿಸಬೇಕು’ ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿಎಚ್‌ಒ ಡಾ.ಕೆ.ಮೋಹನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ ಭಾಗವಹಿಸಿದ್ದರು. 

ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರ ವಿಧಿಸುವ ಬೇಳೆ ಕಟಾವು ಯಂತ್ರಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು
ಕುಮಾರ ಜಿಲ್ಲಾಧಿಕಾರಿ

‘ತಿಂಗಳೊಳಗೆ ಜನನ–ಮರಣ ಪತ್ರ ಪಡೆದುಕೊಳ್ಳಿ’

‘ಜನನ ಮತ್ತು ಮರಣವನ್ನು ನೋಂದಣಿ ಮಾಡಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಅಧಿಕಾರವನ್ನು ನೀಡಲಾಗಿದೆ. ಜನನ ಹಾಗೂ ಮರಣ ಸಂಭವಿಸಿದ 30 ದಿನಗಳೊಳಗೆ ಜನನ ಮತ್ತು ಮರಣ ಪತ್ರ ಮಾಡಿಸಿಕೊಳ್ಳಬೇಕು. ಇಲ್ಲವಾದರೆ 30 ದಿನಗಳು ಮೀರಿದರೆ ತಹಶೀಲ್ದಾರ್ ಬಳಿ ತೆರಳಬೇಕು. ಒಂದು ವರ್ಷ ಮೀರಿದರೆ ಕೋರ್ಟ್ ಮೂಲಕ ಪಡೆಯಬೇಕಾಗುತ್ತದೆ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.