ADVERTISEMENT

ರಾಜ್ಯದ ನೆಲ, ಜಲದ ವಿಷಯದಲ್ಲಿ ಬಿಜೆಪಿ ನಿರ್ಲಕ್ಷ್ಯ: ಪಿ.ಎಂ.ನರೇಂದ್ರಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 16:29 IST
Last Updated 9 ಜನವರಿ 2022, 16:29 IST
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಬೈಕ್ ರ‍್ಯಾಲಿಗೆ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಚಾಲನೆ ನೀಡಿದರು. ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಲಿಂಗರಾಜು, ಚನ್ನಿಗರಾಮು ಇದ್ದಾರೆ
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಬೈಕ್ ರ‍್ಯಾಲಿಗೆ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಚಾಲನೆ ನೀಡಿದರು. ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಲಿಂಗರಾಜು, ಚನ್ನಿಗರಾಮು ಇದ್ದಾರೆ   

ಮಳವಳ್ಳಿ: ರಾಷ್ಟ್ರ ಹಾಗೂ ರಾಜ್ಯವನ್ನು ಅಭಿವೃದ್ಧಿ ಮಾಡಿ ಸಾಧನೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಕರ್ನಾಟಕದ ಜನರ ಜೀವಜಲದ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಕಿಡಿ ಕಾರಿದರು.

ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಘಟಕ ಪಟ್ಟಣದ ಪ್ರವಾಸಿ ಮಂದಿರದ ಬಳಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ನ ಜವಾಬ್ದಾರಿಯುತ ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಯೋಜನೆಯ ಜಾರಿಗಾಗಿ ಸದನದ ಒಳಗೆ ಹಾಗೂ ಹೊರಗೆ ಒತ್ತಾಯ ಮಾಡಿದ್ದರೂ ಕೇಂದ್ರದಿಂದ ಒಪ್ಪಿಗೆ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ‌. ಇಂಥ ವಿಳಂಬ ನೀತಿ ಖಂಡಿಸಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ADVERTISEMENT

ಯೋಜನೆಯಿಂದಾಗಿ ಮಂಡ್ಯ ಮತ್ತು ಮೈಸೂರು ಭಾಗದ ಜನರ ಮೇಲಿನ ನೀರಿನ ಒತ್ತಡ ನಿವಾರಣೆ ಮಾಡಲು ನೆರವಾಗುವ ಈ ಯೋಜನೆ ಸಂಬಂಧದ ಪಾದಯಾತ್ರೆಯನ್ನು ಬೆಂಬಲಿಸಬೇಕು ಎಂದರು.

ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ಶ್ರೀರಂಗಪಟ್ಟಣದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ನಾಡಿನ ಜನರ ಹಿತದೃಷ್ಟಿಯಿಂದ ಮೇಕೆದಾಟು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣವೇ ಜಾರಿ ಮಾಡಬೇಕು. ರಾಜ್ಯದ ನೆಲ, ಜಲ ವಿಚಾರದಲ್ಲಿ ಕಾಂಗ್ರೆಸ್ ಯಾವಾಗಲೂ ಹೋರಾಟ ನಡೆಸುತ್ತದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜೆ.ದೇವರಾಜು, ಎಸ್.ಪಿ.ಸುಂದರ್ ರಾಜ್, ಯುವ ಘಟಕದ ಅಧ್ಯಕ್ಷ ಹುಸ್ಕೂರು ಎಚ್.ಕೆ.ಕೃಷ್ಣಮೂರ್ತಿ, ತಾ.ಪಂ.ಮಾಜಿ ಅಧ್ಯಕ್ಷರಾದ ವಿ.ಪಿ.ನಾಗೇಶ್, ಆರ್.ಎನ್.ವಿಶ್ವಾಸ್, ಪುಟ್ಟಸ್ವಾಮಿ, ಪುರಸಭೆ ಸದಸ್ಯ ಶಿವಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕರಾದ ಲಿಂಗರಾಜ್, ಚೌಡಯ್ಯ, ಮುಖಂಡರಾದ ಮುಟ್ಟನ ಹಳ್ಳಿ ಅಂಬರೀಶ್, ಬಂಕ್ ಮಹದೇವು, ದಿಲೀಪ್ ಕುಮಾರ್, ಚನ್ನಿಗರಾಮು, ಮಲ್ಲಯ್ಯ, ಜಯರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.