ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಜನಾಕ್ರೋಶ ಯಾತ್ರೆ
ಮಂಡ್ಯ/ಹಾಸನ: ಜಿಲ್ಲಾ ಕೇಂದ್ರಗಳಲ್ಲಿ ಮಂಗಳವಾರ ನಡೆದ ಬಿಜೆಪಿ ‘ಜನಾಕ್ರೋಶ ಯಾತ್ರೆ’ಯ ಎರಡನೇ ದಿನವೂ ಪಕ್ಷದ ಮುಖಂಡರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಸಿ.ಎಂ.ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ, ಕೇಂದ್ರ ಸರ್ಕಾರವು ಅಡುಗೆ ಅನಿಲ ದರ ಹೆಚ್ಚಿರುವುದನ್ನು ಗಟ್ಟಿ ದನಿಯಲ್ಲಿ ಸಮರ್ಥಿಸಿಕೊಂಡರು.
‘ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರ ಹಣವನ್ನು ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಲೂಟಿ ಮಾಡುವಲ್ಲಿ ಚಂಬಲ್ ಕಣಿವೆ ದರೋಡೆಕೋರರನ್ನೂ ಮೀರಿಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಂಡ್ಯದಲ್ಲಿ ಆರೋಪಿಸಿದರು.
‘ಮೈಸೂರು ಮಹಾರಾಜರಿಗಿಂತ ಸಿದ್ದರಾಮಯ್ಯ ದೊಡ್ಡವರೆಂದು ಹೇಳಿಕೊಳ್ಳುತ್ತಾರೆ. ಮಹಾರಾಜರು ಪತ್ನಿಯ ಒಡವೆಗಳನ್ನು ಒತ್ತೆ ಇಟ್ಟು ಕೆಆರ್‌ಎಸ್ ಅಣೆಕಟ್ಟೆ ಕಟ್ಟಿಸಿದರು. ಆದರೆ, ಸಿದ್ದರಾಮಯ್ಯನವರು ಪತ್ನಿ ಹೆಸರಿನಲ್ಲಿ 14 ಮುಡಾ ನಿವೇಶನಗಳನ್ನು ಹೊಡೆದುಕೊಂಡರು. ಮಹಾರಾಜರ ವಂಶಸ್ಥರಿಗೆ ನಿರಂತರ ಕಿರುಕುಳ ಕೊಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಹಾಸನದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ‘ಕಾಂಗ್ರೆಸ್ ಹೈಕಮಾಂಡ್ ಹುಂಡಿ ತುಂಬಿಸಲು ಲೂಟಿಗೆ ಇಳಿದಿರುವ ಬಡವರ ವಿರೋಧಿ ರಾಜ್ಯ ಸರ್ಕಾರ, ಬದುಕಿದ್ದೂ ಸತ್ತಂತೆ’ ಎಂದು ಪ್ರತಿಪಾದಿಸಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ಸತ್ತಿದ್ದು, ಅದರ ತಿಥಿ ಮಾಡಲು ಯಾತ್ರೆ ಹಮ್ಮಿಕೊಂಡಿದ್ದೇವೆ. ಅಧಿಕಾರಕ್ಕೆ ಬಂದು ಕೆಲ ವರ್ಷದಲ್ಲಿಯೇ ಬೆಲೆ ಹೆಚ್ಚಿಸಿ ಬಡವರಿಂದ ಛೀ–ಥೂ ಎಂದು ಉಗಿಸಿಕೊಳ್ಳುತ್ತಿದೆ. ಇತಿಹಾಸದಲ್ಲೇ ಇಂತಹ ಕೆಟ್ಟ, ಮೋಸದ ಸರ್ಕಾರ ನೋಡಲು ಸಾಧ್ಯವಿಲ್ಲ’ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಎನ್.ಅಶ್ವತ್ಥನಾರಾಯಣ, ಮುರುಗೇಶ ನಿರಾಣಿ, ಕೆ.ಸಿ.ನಾರಾಯಣಗೌಡ, ಶಾಸಕ ಟಿ.ಎನ್.ಶ್ರೀವತ್ಸ, ಮಾಜಿ ಸಂಸದೆ ಸುಮಲತಾ ಅಂಬರೀಷ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪಾಲ್ಗೊಂಡಿದ್ದರು.
ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಜನಾಕ್ರೋಶ ಯಾತ್ರೆ
‘ಬೆಲೆ ಹೆಚ್ಚಿಸಲು ತಜ್ಞರ ಸಮಿತಿ’
ಮೈಸೂರು: ‘ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಜ್ಞರ ಸಮಿತಿ ಮಾಡಿಕೊಂಡಿದ್ದು, ನಾಡಿನ ಜನರಿಗೆ ಕಪಾಳಕ್ಕೆ ಹೊಡೆಯುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯ ಬಿಟ್ಟರೆ ದೇಶದಲ್ಲಿ ಜನರಿಗೆ ಬೇರೆಲ್ಲೂ ತೆರಿಗೆಯ ಬರೆ ಎಳೆಯುತ್ತಿಲ್ಲ. ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದರಿಂದ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ₹2 ಹೆಚ್ಚಿಸಿದೆ. ಅದನ್ನು ಕಂಪನಿ
ಗಳೇ ಭರಿಸುವುದರಿಂದ ಜನರಿಗೆ ಹೊರೆಯಾಗದು. 2023ರ ಮಾರ್ಚ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ₹1,107 ಇತ್ತು. ಈಗ ₹ 800ರಿಂದ ₹ 850ಕ್ಕೆ ಹೆಚ್ಚಿದೆ. ರಾಹುಲ್ ಗಾಂಧಿಯಂಥ ಪುಣ್ಯಾತ್ಮ ಪ್ರಧಾನಿಯಾಗಿದಿದ್ದರೆ ₹ 2 ಸಾವಿರಕ್ಕೂ ಹೆಚ್ಚಿನ ದರವಿರುತ್ತಿತ್ತು’ ಎಂದು ಟೀಕಿಸಿದರು.
ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಜನಾಕ್ರೋಶ ಯಾತ್ರೆ
‘ಮಂಡ್ಯ ಜನರು ಛತ್ರಿಗಳು’ ಅಂತ ಡಿ.ಕೆ. ಶಿವಕುಮಾರ್ ಟೀಕಿಸುತ್ತಾರೆ. ಮಂಡ್ಯ ಜನರು ಚಕ್ರವರ್ತಿಗಳು, ಮಣ್ಣಿನ ಮಕ್ಕಳು ಎಂಬುದನ್ನು ಅವರಿಗೆ ತಿಳಿಸಿಕೊಡಿ. ಕಳ್ಳ–ಮಳ್ಳರು ಜನರಿಗೆ ದ್ರೋಹ ಮಾಡಿದ್ದಾರೆ. ಸೊಳ್ಳೆ–ತಿಗಣೆಯಂತೆ ಜನರ ರಕ್ತ ಹೀರುತ್ತಿದ್ದಾರೆ. ಯಡಿಯೂರಪ್ಪನವರು ‘ಸರ್ವರಿಗೂ ಸಮಪಾಲು–ಸಮಬಾಳು’ ಎಂದರು. ಆದರೆ, ಸಿದ್ದರಾಮಯ್ಯನವರು ‘ಎಲ್ಲವೂ ಮುಸ್ಲಿಮರ ಪಾಲು’ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಜ್ಞರ ಸಮಿತಿ ರಚಿಸಿಕೊಂಡಿದ್ದು, ನಾಡಿನ ಜನರಿಗೆ ಕಪಾಳ ಮೋಕ್ಷ ಮಾಡುತ್ತಿದ್ದಾರೆ.–ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ (ಮೈಸೂರಿನಲ್ಲಿ ನೀಡಿದ ಹೇಳಿಕೆ)
ಕಾಂಗ್ರೆಸ್ ಸರ್ಕಾರವು ತಾನು ಮಾಡಿರುವ ಬೆಲೆ ಏರಿಕೆ ಸಮರ್ಥನೆಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯನ್ನು ಬಳಸಬಾರದು. ಪುಣ್ಯಾತ್ಮ ಮೋದಿ ಗ್ಯಾಸ್ ಸಿಲಿಂಡರ್ ಅನ್ನು ₹ 300 ಕಡಿಮೆ ಮಾಡಿ, ಈಗ 50 ರೂಪಾಯಿ ಹೆಚ್ಚಿಸಿದ್ದಾರೆ.–ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.