ADVERTISEMENT

ಸಚಿವ ಪುಟ್ಟರಾಜುರಿಂದ ದ್ವೇಷದ ರಾಜಕಾರಣ: ಬಿಜೆಪಿ ಕಾರ್ಯಕರ್ತರ ದೂರು

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 15:32 IST
Last Updated 25 ಜೂನ್ 2019, 15:32 IST
ಪಾಂಡವಪುರದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಪಾಂಡವಪುರದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಪಾಂಡವಪುರ: ‘ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಅವರ ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯರು ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೆರೆತೊಣ್ಣೂರು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಿಸಿದ್ದಾರೆ. ಚಿನಕುರಳಿ ಬಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿಗಳ ಮೇಲಿನ ಥಳಿತ ಪ್ರಕರಣಕ್ಕೆ ಮೌನ ವಹಿಸಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ದೂರಿದರು.

ಪಟ್ಟಣದಲ್ಲಿ ಮಂಗಳವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಚ್.ಕೆ.ಸಂದೇಶ್‌, ‘ಕೆರೆತೊಣ್ಣೂರು ಮೊರಾರ್ಜಿ ವಸತಿ ಶಾಲೆಯಲ್ಲಿ ತಾವು ಹೇಳಿದವರಿಗೆ ಪ್ರವೇಶ ನೀಡಲಿಲ್ಲ ಎಂದು ಅಲ್ಲಿಗೆ ಭೇಟಿ ನೀಡಿ ಪ್ರಾಂಶುಪಾಲರನ್ನು ಅಮಾನತು ಮಾಡಿಸಿದ್ದಾರೆ.’

‘ಚಿನಕುರಳಿ ಬಿಸಿಎಂ ಹಾಸ್ಟೆಲ್‌ನಲ್ಲಿ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ವಾರ್ಡನ್‌, ಅಡುಗೆ ಭಟ್ಟ ಹಾಗೂ ಸಹಾಯಕರ ಮೇಲೆ ಮೇಲಾಧಿಕಾರಿಗಳಿಗೆ ದೂರು ನೀಡಿದ ಅಲ್ಲಿನ ವಿದ್ಯಾರ್ಥಿಗಳಿಗೆ ಹೊರಗಿನ ಗೂಂಡಾಗಳಿಂದ ಥಳಿಸಿದ್ದಾರೆ. ಈ ಘಟನೆ ಸಂಬಂಧ ಈ ನಾಯಕರು ಯಾರು ಗಮನ ಹರಿಸದೆ ಇರುವುದು ಎಷ್ಟು ಸರಿ ?’ ಎಂದು ಹರಿಹಾಯ್ದರು.

ADVERTISEMENT

‘ಬೇಬಿ ಬೆಟ್ಟದಲ್ಲಿ ಸಚಿವ ಪುಟ್ಟರಾಜು ಕುಟುಂಬ ಹಾಗೂ ಅವರ ಬೆಂಬಲಿಗರು ನಡೆಸುತ್ತಿರುವ ಗಣಿಗಾರಿಕೆಯಿಂದ ಸುತ್ತಮುತ್ತಲ ಗ್ರಾಮಗಳಿಗೆ ಮತ್ತು ಕೆಆರ್‌ಎಸ್‌ ಅಣೆಕಟ್ಟೆಗೆ ಅಪಾಯವಿದೆ ಎಂದು ತಿಳಿದುಬಂದಿದ್ದರೂ; ಚಕಾರವೆತ್ತದೆ ಇರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಲೋಕಸಭಾ ಚುನಾವಣಾ ಪೂರ್ವದಲ್ಲಿ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಸಿದಾಗ ಯಾವ ಪ್ರಾಧಿಕಾರದ ಅನುಮತಿಗೆ ಅರ್ಜಿ ಸಲ್ಲಿಸಿದ್ದರು. ಮಂಡ್ಯ ಮೈಶುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳನ್ನು ನಂಬಿ ಕಬ್ಬು ಬೆಳೆದ ರೈತರ ಮತ್ತು ಕಾ‌ರ್ಮಿಕರ ಸಮಸ್ಯೆಯನ್ನು ಆಲಿಸಲು ಸಚಿವ ಪುಟ್ಟರಾಜು ಅವರಿಗೆ ಸಮಯವಿಲ್ಲವೇ ?’ ಎಂದು ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 9 ತಿಂಗಳಿನಿಂದ ವೇತನ ನೀಡಿಲ್ಲ ಎಂದು ನಾನ್‌ ಕ್ಲಿನಿಕಲ್ ನೌಕರರು ಪ್ರತಿಭಟನೆ ನಡೆಸಿದರೂ ಸಹ ಅವರ ಕಷ್ಟಕ್ಕೆ ಸ್ಪಂದಿಸುವುದಕ್ಕೂ ನಿಮಗೆ ಸಮಯವಿಲ್ಲವೇ’ ಎಂದು ಸಚಿವರನ್ನು ಪ್ರಶ್ನಿಸಿದರು.

ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸದಿದ್ದರೆ, ಬಿಜೆ‌ಪಿಯಿಂದ ಜನಾಂದೋಲನ ರೂಪಿಸಬೇಕಾಗುತ್ತದೆ ಎಂದು ಇದೇ ಸಂದರ್ಭ ಎಚ್ಚರಿಸಿದರು.

ಬಿಜೆಪಿ ಮುಖಂಡರಾದ ಎಚ್.ಎನ್.ಮಂಜುನಾಥ್, ನವೀನ್‌, ಸಂದೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.