
ಮಂಡ್ಯ: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ–2025 ಅನ್ನು ರಾಜ್ಯ ಸರ್ಕಾರವು ಜಾರಿಗೆ ತರಬಾರದೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಆಶಯಗಳಿಗೆ ವಿರುದ್ಧವಿರುವ ಈ ವಿಧೇಯಕವು ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನ 19(1) ಪರಿಚ್ಛೇದ ಮತ್ತು ಪರಿಚ್ಛೇದಡಿ(2) ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗಿದೆ. ಅಂಬೇಡ್ಕರ್ ಅವರು ಸಂವಿಧಾನದಡಿ ನೀಡಿದ ಅಭಿವೃಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿದೆ. ಇದರಡಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಮತದಾರರು ಆಡಳಿತ ನಡೆಸುವ ಸರ್ಕಾರದ ವಿರುದ್ಧ ಮಾತನಾಡಬಾರದೆಂದು ಇರನ್ನು ತರಲಾಗುತ್ತಿದೆಯಾ ಎಂದು ಕಿಡಿಕಾರಿದರು.
ಯಾವುದೇ ಅನ್ಯಾಯ ಹಾಗೂ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಿದರೆ ಭಾವನಾತ್ಮಕ ಹಾನಿ ಎಂದು ಆರೋಪಿಸಿ ಬಂಧನ ಮಾಡಲು ಇದು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಪತ್ರಕರ್ತರ ತನಿಖಾ ವರದಿಗಳು ಕೇಸಿನ ತೂಗುಗತ್ತಿ ಎದುರಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯ ಅಥವಾ ಟೀಕೆಯನ್ನು ದ್ವೇಷ ಎಂದು ಕರೆದು ಬ್ಲಾಕ್ ಮಾಡಬಹುದು. ಕಾನೂನು ಕ್ರಮ ಕೈಗೊಳ್ಳಬಹುದು. ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಕಾನೂನು ಜಾರಿ ಮಾಡಿದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ವಸಂತ್‌ಕುಮಾರ್, ಎಸ್.ಆರ್.ಭೀಮೇಶ್, ಕೃಷ್ಣಅಂಕಪ್ಪ ಬೂದನೂರು, ಸಿ.ಟಿ.ಮಂಜುನಾಥ್, ಎಸ್.ಶಿವಕುಮಾರ್ ಆರಾಧ್ಯ, ಪ್ರಸನ್ನಕುಮಾರ್, ಎಂ.ಎನ್.ಸುನೀಲ್, ರಾಜಪ್ಪ, ಚಂದ್ರ, ರಾಜು, ವಿವೇಕ್, ಎಂಎಸ್.ನಂದೀಶ್ ಭಾಗವಹಿಸಿದ್ದರು.
ಸರ್ಕಾರವನ್ನು ಟೀಕಿಸಿದರೆ ಬಂಧನ ಭೀತಿ ಹೋರಾಟಗಾರರು, ಮಾಧ್ಯಮದ ಧ್ವನಿ ಅಡಗಿಸುವ ಕುತಂತ್ರ |ಸಂವಿಧಾನದ ಆಶಯಗಳಿಗೆ ಈ ವಿಧೇಯಕದಿಂದ ಧಕ್ಕೆ
‘ಪೊಲೀಸರಿಗೆ ನಿರಂಕುಶ ಅಧಿಕಾರ’
‘ಪ್ರಜಾಪ್ರಭುತ್ವ ಮೂಲತತ್ವಕ್ಕೆ ಹಾನಿಯುಂಟು ಮಾಡುವುದಷ್ಟೇ ಅಲ್ಲ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನವಾಗಿದೆ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನು ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಕೀಳು ಮಟ್ಟದ ಕಾಯಿದೆ ನಮಗೆ ಬೇಕಾ’ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದರು. ಈ ಕಾಯಿದೆ ಜಾರಿಯಾದರೆ ಪ್ರತಿಬಂಧಕ ಕ್ರಮಗಳನ್ನು ಸಹ ಉಲ್ಲೇಖಿಸಿ ಪೊಲೀಸರು ಅಥವಾ ಅಧಿಕಾರಿಗಳು ಸಂಭಾವ್ಯ ಅಪರಾಧ ಎಂದು ಭಾವಿಸಿ ಮುಂಚಿತವಾಗಿ ಕ್ರಮ ಕೈಗೊಳ್ಳಬಹುದು. ಇದರಿಂದ ಪ್ರತಿಭಟನೆಗಳು ಸಭೆಗಳು ಸಾಮಾಜಿಕ ಚಳವಳಿಗಳನ್ನು ತಡೆಯುವ ಉದ್ದೇಶವಿದೆ. ಈ ವಿಧೇಯಕದಿಂದ ಸಾಮಾಜಿಕ ಕಾರ್ಯಕರ್ತರು ಪತ್ರಕರ್ತರು ಸಾಮಾಜಿಕ ಮಾಧ್ಯಮ ಬಳಸುವವರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಜನರ ಹಾಗೂ ಮಾಧ್ಯಮ ಧ್ವನಿ ನಾಶಪಡಿಸುವ ಈ ಕಾಯಿದೆ ಜಾರಿಯಾಗಬಾರದು ಎಂದು ಆಗ್ರಹ ಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.