ADVERTISEMENT

ಬಿಜೆಪಿ ಟಿಕೆಟ್‌; ಕೋರ್‌ ಕಮಿಟಿ ಸಭೆಯಲ್ಲಿ ಮಂಡ್ಯ ಅಭ್ಯರ್ಥಿಗಳ ನಿರ್ಧಾರ ಭಾನುವಾರ

ಎಂ.ಎನ್.ಯೋಗೇಶ್‌
Published 1 ಏಪ್ರಿಲ್ 2023, 14:20 IST
Last Updated 1 ಏಪ್ರಿಲ್ 2023, 14:20 IST
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಂಡ್ಯ ಗ್ರೀನ್‌ ಪ್ಯಾಲೇಸ್‌ನಲ್ಲಿ ಮತದಾನದ ಮೂಲಕ ಆಂತರಿಕ ಸಮೀಕ್ಷೆ ನಡೆಯಿತು
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಂಡ್ಯ ಗ್ರೀನ್‌ ಪ್ಯಾಲೇಸ್‌ನಲ್ಲಿ ಮತದಾನದ ಮೂಲಕ ಆಂತರಿಕ ಸಮೀಕ್ಷೆ ನಡೆಯಿತು   

ಮಂಡ್ಯ: ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಹಲವು ಮುಖಂಡರು ತಾವೇ ಅಭ್ಯರ್ಥಿಗಳೆಂದು ಈಗಾಗಲೇ ಘೋಷಣೆ ಮಾಡಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯುತ್ತಿದ್ದು ಈಗಾಗಲೇ ಘೋಷಣೆ ಮಾಡಿಕೊಂಡ ಆಕಾಂಕ್ಷಿಗಳಿಗೇ ಟಿಕೆಟ್‌ ದೊರೆಯುವುದೇ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿದೆ.

ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಸಭೆ ನಡೆಯುತ್ತಿದ್ದು ಭಾನುವಾರ ಸಂಜೆ 4.30ಕ್ಕೆ ಜಿಲ್ಲೆಯ ಏಳೂ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರ ಚರ್ಚೆಗೆ ಬರಲಿದೆ. ಟಿಕೆಟ್‌ ಆಕಾಂಕ್ಷಿಗಳೆಲ್ಲರೂ ಬೆಂಗಳೂರಿಗೆ ತೆರಳಲಿದ್ದು ವರಿಷ್ಠರ ಮುಂದೆ ತಮ್ಮ ಮನದಾಳ ಬಿಚ್ಚಿಡಲಿದ್ದಾರೆ. ಹಲವು ಕ್ಷೇತ್ರಗಳಲ್ಲಿ 2–3 ಮಂದಿ ಆಕಾಂಕ್ಷಿಗಳಿದ್ದು ಅಂತಿಮವಾಗಿ ವರಿಷ್ಠರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬ ತಳಮಳ ಮುಖಂಡರಲ್ಲಿದೆ.

ಕಳೆದೆರಡು ದಿನಗಳಿಂದ ನಗರದ ಗ್ರೀನ್‌ ಪ್ಯಾಲೇಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಆಂತರಿಕ ಸಮೀಕ್ಷೆ ನಡೆದಿದೆ. ಕಾರ್ಯಕರ್ತರು ಮತದಾನ ಮಾಡಿದ್ದು ಅದರ ಫಲಿತಾಂಶ ಕೂಡ ಕೋರ್‌ ಕಮಿಟಿ ಸಭೆ ಮುಂದೆ ಬರಲಿದೆ. ಫಲಿತಾಂಶ ಹಾಗೂ ಆಕಾಂಕ್ಷಿಗಳ ಶಕ್ತಿ ಆಧರಿಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕೆ.ಆರ್‌.ಪೇಟೆ ಕ್ಷೇತ್ರದಿಂದ ಸಚಿವ ಕೆ.ಸಿ.ನಾರಾಯಣಗೌಡ ಕಣಕ್ಕಿಳಿಯಲಿದ್ದಾರೆ. ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಕೇಂದ್ರ ಸಚಿವ ಅಮಿತ್‌ ಶಾ ಭೇಟಿ, ಮನವೊಲಿಕೆ ಬಳಿಕ ನಾರಾಯಣಗೌಡರು ಬಿಜೆಪಿಯಿಂದಲೇ ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ.

ಮಂಡ್ಯ ಕ್ಷೇತ್ರದಿಂದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ ಜಯರಾಂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಾದ್ಯಂತ ವಿವಿಧ ಕಾರ್ಯಕ್ರಮ ನಡೆಸಿರುವ ಅವರು ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ. ವರಿಷ್ಠರು ತಮ್ಮನ್ನೇ ಅಭ್ಯರ್ಥಿಯೆಂದು ಘೋಷಣೆ ಮಾಡಲಿದ್ದಾರೆ ಎಂಬ ಭರವಸೆಯೊಂದಿಗೆ ಅವರು ಮುನ್ನಡೆಯುತ್ತಿದ್ದಾರೆ. ಅವರ ಜೊತೆಗೆ ಚಂದಗಾಲು ಶಿವಣ್ಣ, ಡಾ.ಸಿದ್ದರಾಮಯ್ಯ ಕೂಡ ಆಕಾಂಕ್ಷಿಯಾಗಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಎಸ್‌.ಸಚ್ಚಿದಾನಂದ ಕಳೆದೆರಡು ವರ್ಷಗಳಿಂದ ಸಂಚಾರ ಮಾಡುತ್ತಿದ್ದಾರೆ. ಪಕ್ಷದ ಮುಖಂಡರು ಹಲವು ಬಾರಿ ಇವರೇ ಅಭ್ಯರ್ಥಿ ಎಂದು ಹೇಳಿದ್ದು ಹೆಸರು ಘೋಷಣೆ ಬಾಕಿ ಇದೆ. ಇವರ ಜೊತೆಗೆ ರೈತ ಮೋರ್ಚ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್‌.ನಂಜುಂಡೇಗೌಡ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಡಾ.ಸಿದ್ದರಾಮಯ್ಯ ಮಂಡ್ಯ ಅಥವಾ ಶ್ರೀರಂಗಪಟ್ಟಣದಿಂದ ಟಿಕೆಟ್‌ ಕೋರಿದ್ದಾರೆ. ರೈತ ಮೋರ್ಚದಿಂದ ರಾಜ್ಯದಲ್ಲಿ ನಾಲ್ವರಿಗೆ ಟಿಕೆಟ್‌ ದೊರೆಯುವ ಸಾಧ್ಯತೆ ಇದ್ದು ಕೆ.ಎಸ್‌.ನಂಜುಂಡೇಗೌಡರ ಹೆಸರು ಮುನ್ನೆಲೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಮದ್ದೂರು ಕ್ಷೇತ್ರದಲ್ಲಿ ಮನ್‌ಮುಲ್‌ ನಿರ್ದೇಶಕ ಎಸ್‌.ಪಿ.ಸ್ವಾಮಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇಲ್ಲಿ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಇಲ್ಲದ ಕಾರಣ ಯಾವುದೇ ಗೊಂದಲವಿಲ್ಲ. ಮೇಲುಕೋಟೆ ಕ್ಷೇತ್ರದಿಂದ ಡಾ.ಇಂದ್ರೇಶ್‌ ಕ್ಷೇತ್ರದಾದ್ಯಂತ ಹೆಸರು ಹರಿದಾಡುತ್ತಿದ್ದು ವರಿಷ್ಠರು ಇವರ ಹೆಸರನ್ನೇ ಘೋಷಣೆ ಮಾಡುವ ನಿರೀಕ್ಷೆ ಇದೆ. ಇಲ್ಲೂ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಇಲ್ಲ.

ಮಳವಳ್ಳಿ ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳಿದ್ದು ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಗೊಂದಲದ ಗೂಡಾಗಿದೆ. ಮಾಜಿ ಸಚಿವ ಬಿ.ಸೋಮಶೇಖರ್‌, ಮುನಿರಾಜು, ಯಮದೂರು ಸಿದ್ದರಾಜು, ಪರಮಾನಂದ ಮುಂತಾದವರು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

‘ಭಾನುವಾರ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ವಾರದೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ.ಉಮೇಶ್‌ ಹೇಳಿದರು.

***

ಎಲ್‌ಆರ್‌ಎಸ್‌ಗೆ ಟಿಕೆಟ್‌ ಖಚಿತ?

ನಾಗಮಂಗಲ ಕ್ಷೇತ್ರದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಫೈಟರ್‌ ರವಿ (ಮಲ್ಲಿಕಾರ್ಜುನ್‌) ಅವರಿಗೆ ಬಿಜೆಪಿ ಟಿಕೆಟ್‌ ದೊರೆಯುವುದು ಅನುಮಾನ. ಬೆಂಗಳೂರಿನ ವಯ್ಯಾಲಿಕಾವಲ್‌ ಠಾಣೆಯಲ್ಲಿ ಅವರು ರೌಡಿಶೀಟರ್‌ ಆಗಿದ್ದು ಅದು ಬಿಜೆಪಿ ಟಿಕೆಟ್‌ ಪಡೆಯಲು ಅಡ್ಡಿಯಾಗಿದೆ.

ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಈಗಾಗಲೇ ಬಿಜೆಪಿ ಸೇರಿದ್ದು ಅವರಿಗೆ ಟಿಕೆಟ್‌ ದೊರೆಯುವುದು ನಿಶ್ಚಿತ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.