ADVERTISEMENT

ಪುಸ್ತಕ ಓದಿನಿಂದ ಬದಲಾವಣೆ ಸಾಧ್ಯ: ರಂಗಕರ್ಮಿ ಶ್ರೀನಿವಾಸಪ್ರಭು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 3:20 IST
Last Updated 27 ಅಕ್ಟೋಬರ್ 2025, 3:20 IST
ಮಂಡ್ಯದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕೆ.ಪ್ರಭಾಕರ್‌ ಅವರ ‘ಜಡ್ಜ್‌ ಮೆಂಟ್‌’ ಹಾಗೂ ಸುಮಾರಾಣಿ ಅವರ ‘ದೇವರ ಹುಡುಕಾಟದಲ್ಲಿ’ ಕೃತಿ ಲೋಕಾರ್ಪಣೆ ಮಾಡಲಾಯಿತು
ಮಂಡ್ಯದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕೆ.ಪ್ರಭಾಕರ್‌ ಅವರ ‘ಜಡ್ಜ್‌ ಮೆಂಟ್‌’ ಹಾಗೂ ಸುಮಾರಾಣಿ ಅವರ ‘ದೇವರ ಹುಡುಕಾಟದಲ್ಲಿ’ ಕೃತಿ ಲೋಕಾರ್ಪಣೆ ಮಾಡಲಾಯಿತು   

ಮಂಡ್ಯ: ಪುಸ್ತಕ ಓದುವ ಸಂಸ್ಕೃತಿ ಸಮಾಜದಲ್ಲಿ ಹೆಚ್ಚಾದರೆ ಒಂದಿಷ್ಟು ಬದಲಾವಣೆ ಕಾಣಲು ಸಾಧ್ಯ ಎಂದು ರಂಗಕರ್ಮಿ ಶ್ರೀನಿವಾಸಪ್ರಭು ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಚಿರಂತ ಪ್ರಕಾಶನ ವತಿಯಿಂದ ಭಾನುವಾರ ನಡೆದ ಕೆ.ಪ್ರಭಾಕರ್‌ ಅವರ ‘ಜಡ್ಜ್‌ಮೆಂಟ್‌’ ಹಾಗೂ ಸುಮಾರಾಣಿ ಅವರ ‘ದೇವರ ಹುಡುಕಾಟದಲ್ಲಿ’ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯ ಜೀವನದಲ್ಲಿ ಮಿತಿಯನ್ನು ಹಾಕಿಕೊಳ್ಳುತ್ತಾನೆ. ಆದರೆ ಕೆಲವೊಮ್ಮೆ ನಾವೇ ನಮ್ಮ ಮಿತಿ ದಾಟಿ ಮುನ್ನುಗ್ಗಿದಾಗ ಸಾಧನೆ ಸಾಧ್ಯವಾಗುತ್ತದೆ. ಮನುಷ್ಯ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಚೌಕಟ್ಟು ಹಾಕಿಕೊಂಡು, ಆ ಮಿತಿಯನ್ನ ನಾವೇ ಮೀರಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಮನುಷ್ಯರಾದವರು ನಿರಂತರವಾಗಿ ಕನಸು ಕಾಣುತ್ತಿರಬೇಕು. ಆ ಕನಸು ಯಾವಾಗಲೂ ದೊಡ್ಡದಾಗಿರಬೇಕು. ಆ ಮೂಲಕ ಕನಸುಗಳನ್ನು ನಾವು ಕಳೆದುಕೊಳ್ಳಬಾರದು. ಇಲ್ಲಿ ಲೇಖಕಿ ಸುಮಾರಾಣಿ ಶಂಭು ಅವರು ತಮ್ಮ ಕೃತಿಯಲ್ಲಿ ಚೌಕಟ್ಟು ಹಾಕಿಕೊಳ್ಳದೆ ವಿಶಿಷ್ಟ ದೃಷ್ಟಿಕೋನದೊಂದಿಗೆ ಸಾಹಿತ್ಯ ಕೃಷಿ ಮಾಡಿದ್ದಾರೆ ಎನ್ನುವುದು ವಿಶೇಷ. ಈ ಕೃತಿಯಲ್ಲಿ ಇತಿಹಾಸ ಹಾಗೂ ಪುರಾಣಗಳ ಉಲ್ಲೇಖ ಇರುವುದರಿಂದ ಇದನ್ನು ಓದುವುದು ಮುಖ್ಯವಾಗಬೇಕು’ ಎಂದರು.

ದೇವರ ಹುಡುಕಾಟದಲ್ಲಿ ಕೃತಿ ಕುರಿತು ಮಾತನಾಡಿದ ಸಹ ಪ್ರಾಧ್ಯಾಪಕ ಕೆ.ಸೋಮಶೇಖರ, ‘ಭಾವನೆಗಳು ಸುಮಾರಾಣಿ  ಅವರ ಲೇಖನಿಯಲ್ಲಿ ಉತ್ತಮವಾಗಿ ವ್ಯಕ್ತವಾಗಿವೆ. ದೇವರ ಹುಡುಕಾಟದಲ್ಲಿ ಮೌಲಿಕ ಕೃತಿ ಆಗಿದೆ’ ಎಂದು ಹೇಳಿದರು.

‘ಜಡ್ಚ್‌ಮೆಂಟ್’ ಕೃತಿ ಕುರಿತು ಮಾತನಾಡಿದ ಹೈಕೋರ್ಟ್‌ ವಕೀಲ ಲೋಹಿತ್ ಹನುಮಾಪುರ, ‘ವಕೀಲ ವೃತ್ತಿಯಲ್ಲಿ ಒಳ್ಳೆಯ ಹೆಸರು ಗಳಿಸುವುದು ಕಷ್ಟ. ಪ್ರತಿಯೊಬ್ಬ ವಕೀಲರಿಗೂ ಕೂಡ ಈ ಕೃತಿ ದಾರಿದೀಪವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿಗಳಾದ ರಂಜನಿ ಪ್ರಭು, ಸುಮಾರಾಣಿ ಶಂಭು, ಕೆ.ಪ್ರಭಾಕರ್, ಚಿರಂತ ಪ್ರಕಾಶನದ ಕಬ್ಬನಹಳ್ಳಿ ಶಂಭು, ಶಮಂತಕ ಪ್ರಭಾಕರ್ ಭಾಗವಹಿಸಿದ್ದರು.

ಕೃತಿಗಳ ಪರಿಚಯ

ಕೃತಿ– ದೇವರ ಹುಡುಕಾಟದಲ್ಲಿ

ಸಾಹಿತಿ– ಸುಮಾರಾಣಿ ಶಂಭು

ಪುಟಗಳು– 132

ಬೆಲೆ– ₹158

ಮುದ್ರಣ– ತಾರಾ ಪ್ರಿಂಟ್ಸ್‌ ಮೈಸೂರು

ಪ್ರಕಾಶನ ಕೃತಿ– ಜಡ್ಜ್‌ಮೆಂಟ್‌

ಪ್ರಕಾಶನ– ಆನಂದಿ

ಸಾಹಿತಿ–ಕೆ.ಪ್ರಭಾಕರ್‌

ಪುಟಗಳು– 156

ಬೆಲೆ– ₹190 ಮುದ್ರಣ– ತಾರಾ ಪ್ರಿಂಟ್ಸ್‌ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.