ADVERTISEMENT

ಭಾಷೆ, ಭಾವದಿಂದ ಕೃತಿಯ ಆಕರ್ಷಣೆ: ರಮೇಶ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 13:45 IST
Last Updated 11 ಸೆಪ್ಟೆಂಬರ್ 2021, 13:45 IST
ಐಡಿಯಲ್‌ ಪ್ರಕಾಶನ ಪ್ರಕಟಿಸಿರುವ ಶುಭಶ್ರೀ ಪ್ರಸಾದ್‌ ಅವರ ‘ಒಳಮನ’ ಕೃತಿಯನ್ನು ಕೆ.ಎಂ.ವಸುಂಧರಾ ಬಿಡುಗಡೆಗೊಳಿಸಿದರು
ಐಡಿಯಲ್‌ ಪ್ರಕಾಶನ ಪ್ರಕಟಿಸಿರುವ ಶುಭಶ್ರೀ ಪ್ರಸಾದ್‌ ಅವರ ‘ಒಳಮನ’ ಕೃತಿಯನ್ನು ಕೆ.ಎಂ.ವಸುಂಧರಾ ಬಿಡುಗಡೆಗೊಳಿಸಿದರು   

ಮಂಡ್ಯ: ‘ಯಾವುದೇ ಸಾಹಿತ್ಯ ಕೃತಿ ಓದುಗರನ್ನು ಆಕರ್ಷಿಸಬೇಕಾದರೆ ಕೃತಿಯಲ್ಲಿರುವ ಭಾಷೆ ಹಾಗೂ ಭಾವ ಸೆಳೆಯುವಂತಿರಬೇಕು. ಭಾಷೆ, ಭಾವ ಸೆಳೆಯದಿದ್ದರೆ ಕೃತಿ ಸೋಲು ಕಾಣುತ್ತದೆ’ ಎಂದು ಉಪನ್ಯಾಸಕ ಡಾ.ನೀ.ಗೂ.ರಮೇಶ್‌ ಹೇಳಿದರು.

ಐಡಿಯಲ್‌ ಪಬ್ಲಿಕೇಷನ್‌, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಕೆವಿಎಸ್‌ ಶತಮಾನೋತ್ಸವ ಭವನದಲ್ಲಿ ಶನಿವಾರ ನಡೆದ ಲೇಖಕಿ ಶುಭಶ್ರೀ ಪ್ರಸಾದ್‌ ಅವರ ‘ಒಳಮನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಾವುದೇ ಪುಸ್ತಕ ಓದಿದಾಗ ಅಲ್ಲಿಯ ಭಾವನೆಗಳು ಸಮಾಧಾನ, ತೃಪ್ತಿ, ಸಂತೋಷ ಕೊಡಬೇಕು. ಸಂತೋಷ ಕೊಡದಿದ್ದರೂ ಬೇಸರವನ್ನಾದರೂ ತರಿಸಬೇಕು, ಪ್ರಶ್ನೆ, ಅಸಮಾಧಾನ ಹುಟ್ಟಿಸಬೇಕು. ಲೇಖಕ ಬರೆದದ್ದೆಲ್ಲವನ್ನೂ ಒಪ್ಪಿಕೊಳ್ಳಬೇಕಾಗಿಲ್ಲ, ಅದನ್ನು ಪ್ರಶ್ನೆ ಮಾಡಲೂಬಹುದು. ಕೃತಿ ಓದುಗನಲ್ಲಿ ಯಾವುದೇ ಮನೋಭಾವ ಮೂಡಿಸದಿದ್ದರೆ ಆ ಕೃತಿ ಸೋತಂತಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಲೇಖಕನಿಗೆ ನಿಲುವುಗಳು ಅತ್ಯಾವಶ್ಯಕ. ಬರಹಗಳೆಲ್ಲವೂ ಅನುಭವಗಳ ಗೊಂಚಲುಗಳಾಗಬಾರದು. ಯಾವುದೇ ವಿಷಯ ಬರೆದಾಗ ಭಾವನೆಗಳಷ್ಟನ್ನೇ ಅನಾವರಣಗೊಳಿಸದೇ ಹೊರಗಿನ ಬೆಳವಣಿಗೆಗಳನ್ನೂ ಸೇರ್ಪಡೆ ಮಾಡಬೇಕು. ಸಮಸ್ಯೆಗಳ ಬಗ್ಗೆ ಚರ್ಚಿಸದೇ ಪರಿಹಾರಗಳ ಬಗ್ಗೆಯೂ ಹುಡುಕಾಟ ಮಾಡಬೇಕು. ಬರಹ ಯಾವುದಾದರೂ ತೀರ್ಮಾನಗಳನ್ನು ಸೂಚಿಸಬೇಕು. ಆಗ ಮಾತ್ರ ಕೃತಿ ಓದುಗರ ಮನಸ್ಸಿನಲ್ಲಿ ಉಳಿಯುತ್ತದೆ’ ಎಂದರು.

‘ಲೇಖಕಿ ಶುಭಶ್ರೀ ಪ್ರಸಾದ್ ಅವರು ವಿದ್ವಾಂಸರನ್ನು, ವಿಮರ್ಶಕರನ್ನು ಮೆಚ್ಚಿಸುವ ಬದಲಾಗಿ ಪುಸ್ತಕ ಬರೆದಿಲ್ಲ. ತಮ್ಮ ಭಾವನೆಗಳನ್ನು ನೇರಾನೇರವಾಗಿ ಅನಾವರಣಗೊಳಿಸುತ್ತಾ ಓದುಗರಿಗೆ ಇಷ್ಟವಾಗುತ್ತಾರೆ. ಅವರ ಕೃತಿಯಲ್ಲಿ ಸಮಾಜ ಶಾಸ್ತ್ರೀಯ, ಮನೋ ವೈಜ್ಞಾನಿಕ ವಿಷಯಗಳು ಎದ್ದು ಕಾಣುತ್ತವೆ, ಬರಹದಲ್ಲಿ ಚಿಕಿತ್ಸಕ ಗುಣವಿದೆ. ಪ್ರಚಲಿತ ವಿದ್ಯಾಮಾನಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಅನುಭವಗಳನ್ನು ಅಕ್ಷರ ರೂಪಕ್ಕಿಳಿಸುತ್ತಾ ಸಾಗುತ್ತಾರೆ. ಬಾಂಧವ್ಯಗಳನ್ನು ಗಟ್ಟಿಗೊಳಿಸುವ ವಿಚಾರಗಳು ಅವರ ಪುಸ್ತಕದಲ್ಲಿವೆ’ ಎಂದರು.

ನಿವೃತ್ತ ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಕತೆಗಾರ್ತಿ ಕೆ.ಎಂ.ವಸುಂಧರಾ ಪುಸ್ತಕ ಬಿಡುಗಡೆ ಮಾಡಿದರು. ಸಾಹಿತಿ ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಎಂ.ಎಸ್‌.ಶಿವಪ್ರಕಾಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.