ADVERTISEMENT

ಮಂಡ್ಯ: 10,885 ‘ಬಿಪಿಎಲ್‌’ ಪಡಿತರ ಚೀಟಿಗಳು ‘ಎಪಿಎಲ್‌’ಗೆ ಬದಲಾವಣೆ

702 ಅರ್ಹರು ಪತ್ತೆ!

ಸಿದ್ದು ಆರ್.ಜಿ.ಹಳ್ಳಿ
Published 28 ನವೆಂಬರ್ 2024, 6:36 IST
Last Updated 28 ನವೆಂಬರ್ 2024, 6:36 IST
ರೇಶನ್ ಕಾರ್ಡ್ (ಸಾಂದರ್ಭಿಕ ಚಿತ್ರ)
ರೇಶನ್ ಕಾರ್ಡ್ (ಸಾಂದರ್ಭಿಕ ಚಿತ್ರ)   

ಮಂಡ್ಯ: ಬಿಪಿಎಲ್‌ ಕಾರ್ಡ್‌ ಪರಿಷ್ಕರಣೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ‘ಸರ್ಕಾರಿ ನೌಕರರು’ ಮತ್ತು ‘ಆದಾಯ ತೆರಿಗೆ ಪಾವತಿದಾರರು’ ಹೊಂದಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಹೊರತುಪಡಿಸಿ, ಉಳಿದೆಲ್ಲ ಪಡಿತರ ಚೀಟಿಗಳನ್ನು ಮುಂದುವರಿಸುವಂತೆ ಆಹಾರ ಇಲಾಖೆಗೆ ಸೂಚಿಸಿದೆ.

‘ಆದಾಯ ತೆರಿಗೆ ಪಾವತಿದಾರರು’ ಎಂಬ ಕಾರಣದಿಂದ ಜಿಲ್ಲೆಯಲ್ಲಿ 5,178 ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲು ನಿರ್ಧರಿಸಿದ್ದ ಇಲಾಖೆಯು, ಈಗ 702 ಅರ್ಹರನ್ನು ಪತ್ತೆ ಮಾಡಿದ್ದು, ಅವರಿಗೆ ಕಾರ್ಡ್ ಮತ್ತೆ ದೊರಕಲಿದೆ. ಕಾರ್ಡ್‌ಗಳು ರದ್ದಾಗಿದ್ದರಿಂದ, ಗ್ಯಾರಂಟಿ ಯೋಜನೆ ಸೇರಿದಂತೆ ಸೌಲಭ್ಯಗಳಿಂದ ವಂಚಿತರಾದ ಬಡವರು ಅರ್ಜಿ ಸಲ್ಲಿಸಿ, ಕಾರ್ಡ್‌ ಮರಳಿ ಕೊಡುವಂತೆ ಕೋರಿದ್ದರು.

‌ಬಡವರ, ಕಾರ್ಮಿಕರ ಬಿಪಿಎಲ್‌ ಕಾರ್ಡ್‌ಗಳು ರದ್ದಾಗಿರುವ ಬಗ್ಗೆ ವಿವಿಧ ಸಂಘಟನೆಗಳು ರಾಜ್ಯದಾದ್ಯಂತ ಪ್ರತಿಭಟಿಸಿದ್ದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈಗ ಹೊರಡಿಸಿರುವ ಆದೇಶದ ಅನುಸಾರ, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದ ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆಯ ‘ಇ–ಪೋರ್ಟಲ್‌’ನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದು, 702 ಮಂದಿ ಆದಾಯ ತೆರಿಗೆ ಪಾವತಿಸುತ್ತಿಲ್ಲ ಎಂಬುದು ‌ದೃಢಪಟ್ಟಿದೆ.

ADVERTISEMENT

ಪ್ಯಾನ್‌–ಆಧಾರ್‌ ಜೋಡಣೆಗೆ ನೀಡಿದ್ದ ಕಾಲಮಿತಿ ಮೀರಿದವರು ಕಟ್ಟಿದ್ದ ₹1 ಸಾವಿರ ದಂಡದ ಮೊತ್ತವು ಆದಾಯ ತೆರಿಗೆ ಇಲಾಖೆಗೆ (ಐ.ಟಿ) ಪಾವತಿಯಾಗಿದ್ದರಿಂದ, ಅವರನ್ನು ‘ಆದಾಯ ತೆರಿಗೆ ಪಾವತಿದಾರರು’ ಎಂಬ ಪಟ್ಟಿಗೆ ಸೇರಿಸಲಾಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡ ಇಲಾಖೆ ಕಾರ್ಡ್‌ ರದ್ದುಪಡಿಸಲು ಮುಂದಾಗಿತ್ತು.

‘ಜಿಲ್ಲೆಯಲ್ಲಿ 6 ತಿಂಗಳಿಂದ ಸತತವಾಗಿ ರೇಷನ್‌ ಪಡೆಯದ 8,061 ಪಡಿತರ ಚೀಟಿದಾರರು, 2,657 ಐಟಿ ಪಾವತಿದಾರರು, 36 ಸರ್ಕಾರಿ ನೌಕರರು, ₹1.20 ಲಕ್ಷಕ್ಕಿಂತ ಹೆಚ್ಚುವರಿ ಆದಾಯವಿರುವ 131 ಪಡಿತರ ಚೀಟಿದಾರರು ಸೇರಿದಂತೆ ಒಟ್ಟು 10,885 ಬಿಪಿಎಲ್‌ ಕಾರ್ಡ್‌ಗಳನ್ನು ‘ಎಪಿಎಲ್‌’ಗೆ ಬದಲಾಯಿಸಲಾಗಿದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಅನ್ನ ಸಿಗದೆ, ಹಸಿವಿನಿಂದ ನರಳುವ ಬಡವರ ಸ್ಥಿತಿ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ. ‘ಐಟಿ ಪಾವತಿದಾರರು’ ಎಂಬ ನೆಪವೊಡ್ಡಿ ಬಡವರ ಬಿಪಿಎಲ್‌ ಕಾರ್ಡ್‌ಗಳನ್ನು ಕಸಿಯಬಾರದು. ಅರ್ಹರಿಗೆ ಕೂಡಲೇ ಮರಳಿಸಬೇಕು’ ಎಂದು ಸಿಐಟಿಯು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಒತ್ತಾಯಿಸಿದ್ದಾರೆ.

‘ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕಿಸಿ’

‘ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ಸಿಗುತ್ತದೆ’ ಎಂಬ ಕಾರಣಕ್ಕೆ ಅನರ್ಹರು ‘ಬಿಪಿಎಲ್‌ ಕಾರ್ಡ್‌’ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಗುಣಮಟ್ಟದ ಚಿಕಿತ್ಸೆ ದೊರಕಿಸಿದರೆ ಇದನ್ನು ತಡೆಗಟ್ಟಬಹುದು. ಬಿಪಿಎಲ್‌’ ಪಡೆಯಲು ವಾರ್ಷಿಕ ಆದಾಯ ₹1.20 ಲಕ್ಷದೊಳಗಿರಬೇಕೆಂಬ ಮಾನದಂಡವೇ ಅವೈಜ್ಞಾನಿಕ. ಅದನ್ನು ಸರ್ಕಾರ ಪುನರ್‌ ಪರಿಶೀಲಿಸಬೇಕು’ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಒತ್ತಾಯಿಸಿದ್ದಾರೆ. 

ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರಾದವರ ವಿವರ  (ತಾಲ್ಲೂಕು;ಪಡಿತರ ಚೀಟಿ ಸಂಖ್ಯೆ)

ಕೆ.ಆರ್‌.ಪೇಟೆ :116

ಮದ್ದೂರು : 302

ಮಂಡ್ಯ : 100

ಮಳವಳ್ಳಿ : 77

ನಾಗಮಂಗಲ : 09

ಪಾಂಡವಪುರ : 20

ಶ್ರೀರಂಗಪಟ್ಟಣ : 78

ಒಟ್ಟು : 702

ಬಿಪಿಎಲ್‌ ಪರಿಷ್ಕರಣೆ ವೇಳೆ ಕೆಲವು ಅರ್ಹ ಫಲಾನುಭವಿಗಳ ಹೆಸರು ಬಿಟ್ಟುಹೋಗಿರುವುದು ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲು ಇಲಾಖೆ ಮತ್ತು ಆಯೋಗ ಮುಂದಾಗಿದೆ.
ಡಾ.ಕೃಷ್ಣ, ಅಧ್ಯಕ್ಷ, ರಾಜ್ಯ ಆಹಾರ ಆಯೋಗ
ಐಟಿ ಪಾವತಿ ಮಾಡದ ಬಡವರ ಬಿಪಿಎಲ್‌ ಕಾರ್ಡ್‌ಗಳು ರದ್ದಾಗಿರುವ ಬಗ್ಗೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಮತ್ತೆ ಕಾರ್ಡ್‌ ಕೊಡಲು ಕ್ರಮವಹಿಸುತ್ತೇವೆ.
ಕೃಷ್ಣಕುಮಾರ್‌, ಉಪನಿರ್ದೇಶಕ, ಆಹಾರ ಇಲಾಖೆ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.