ADVERTISEMENT

ಮುರಿದ ಲೋಕಪಾವನಿ ನದಿ ಸೇತುವೆ ತಡೆಗೋಡೆ: ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 12:22 IST
Last Updated 29 ಜನವರಿ 2020, 12:22 IST
ಶ್ರೀರಂಗಪಟ್ಟಣ ತಾಲ್ಲೂಕು ಬಾಬುರಾಯನಕೊಪ್ಪಲು ಬಳಿ, ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಲೋಕಪಾವನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ‌ ತಡೆಗೋಡೆ ಮುರಿದಿರುವುದು
ಶ್ರೀರಂಗಪಟ್ಟಣ ತಾಲ್ಲೂಕು ಬಾಬುರಾಯನಕೊಪ್ಪಲು ಬಳಿ, ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಲೋಕಪಾವನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ‌ ತಡೆಗೋಡೆ ಮುರಿದಿರುವುದು   

ಶ್ರೀರಂಗಪಟ್ಟಣ: ತಾಲ್ಲೂಕಿನ ಬಾಬುರಾಯನಕೊಪ್ಪಲು ಬಳಿ, ಬೆಂಗಳೂರು ಮೈಸೂರು ಹೆದ್ದಾರಿಗೆ ಲೋಕಪಾವನಿ ನದಿಗೆ ನಿರ್ಮಿಸಿರುವ ಸೇತುವೆಯ ತಡೆಗೋಡೆ ಕುಸಿದಿದೆ.

ಒಂದು ತಿಂಗಳ ಹಿಂದೆ ವಾಹನವೊಂದು ಡಿಕ್ಕಿ ಹೊಡೆದು ಶಿಥಿಲಗೊಂಡಿದ್ದ ಈ ತಡೆಗೋಡೆ ಇದೀಗ ಮತ್ತಷ್ಟು ಕುಸಿದಿದೆ. 20 ಅಡಿಗಳಿಗಿಂತಲೂ ಹೆಚ್ಚು ಉದ್ದದಷ್ಟು ತಡೆಗೋಡೆ ಮುರಿದು ಬಿದ್ದಿದೆ. ಮೈಸೂರು ಕಡೆ ತೆರಳುವ ವಾಹನಗಳ ಚಾಲಕರು ತುಸು ಮೈ ಮರೆತರೂ ನದಿಗೆ ಬೀಳು ಸಂಭವ ಹೆಚ್ಚಾಗಿದೆ. ಈ ಸೇತುವೆಯ ಹಿಂದೆ, ಬೆಂಗಳೂರು ಮತ್ತು ಬನ್ನೂರು ರಸ್ತೆಗಳು ಕೂಡುತ್ತವೆ. ಈ ಸ್ಥಳದಲ್ಲಿ ತೀವ್ರ ತಿರುವು ಕೂಡ ಇರುವುದು ಅಪಾಯದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಮೂರು ವರ್ಷಗಳ ಹಿಂದೆ ಲೋಕಪಾವನಿ ನದಿ ಸೇತುವೆಯ ಮೇಲಿಂದ ಲಾರಿ ಉರುಳಿ ಇಬ್ಬರು ಮೃತಪಟ್ಟಿದ್ದರು. ಒಂದು ವರ್ಷದ ಹಿಂದಷ್ಟೇ ಬೈಕ್‌ ಸವಾರ ಸೇತುವೆಯ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ. ಮಹದೇವಪುರದ ದಂಪತಿ ಕೂಡ ಅಸು ನೀಗಿದ್ದರು. ಇಂಥ ಅಪಾಯಕಾರಿ ಸೇತುವೆಯ ತಡೆಗೋಡೆ ಕುಸಿದು ತಿಂಗಳು ಕಳೆದರೂ ದುರಸ್ತಿ ಮಾಡದೇ ಇರುವುದು ವಾಹನ ಚಾಲಕರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಲೋಕಪಾವನಿ ನದಿ ಸೇತುವೆ ತಡೆಗೋಡೆ ಕುಸಿದಿರುವ ವಿಷಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಿಳಿದಿದೆ. ಆದರೂ ಅದನ್ನು ದುರಸ್ತಿ ಮಾಡಲು ಮನಸ್ಸು ಮಾಡುತ್ತಿಲ್ಲ. ಅವಘಡ ಸಂಭವಿಸುವ ಮುನ್ನ ಈ ತಡೆಗೋಡೆಯನ್ನು ದುರಸ್ತಿ ಮಾಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಚಂದಗಾಲು ಶಂಕರ್‌ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಎಂ.ಬಿ. ರಾಜು ಸಂಪರ್ಕಕ್ಕೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.