ADVERTISEMENT

ಹಸೆಮಣೆ ಏರಬೇಕಿದ್ದ ಯುವಕನನ್ನು ಸ್ವಂತ ಅಣ್ಣನೇ 28 ಬಾರಿ ಚಾಕುವಿನಿಂದ ಇರಿದು ಕೊಂದ!

ಸಹೋದರ ಮತ್ತು ಆತನ ಮಕ್ಕಳ ವಿರುದ್ಧ ಕೆರಗೋಡು ಠಾಣೆಯಲ್ಲಿ ದೂರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:48 IST
Last Updated 17 ಜನವರಿ 2026, 6:48 IST
ಯೋಗೇಶ್‌ 
ಯೋಗೇಶ್‌    

ಮಂಡ್ಯ: ಐದು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು ಅಣ್ಣನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾದ ಘಟನೆ ತಾಲ್ಲೂಕಿನ ಮಾಯಪ್ಪನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. 

ಗ್ರಾಮದ ಯೋಗೇಶ್ (30) ಕೊಲೆಯಾದ ವ್ಯಕ್ತಿ. ಆಸ್ತಿ ಕಲಹ ವಿಚಾರದಲ್ಲಿ ಅಣ್ಣ ನಿಂಗರಾಜು ಹಾಗೂ ಆತನ ಮಕ್ಕಳಾದ ಭರತ್‌, ದರ್ಶನ್‌ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೃತನ ಸಹೋದರ ಕೆಂಪೇಗೌಡ ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು ನಿಂಗರಾಜು ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಯೋಗೇಶ್ ಅವರು ಅಣ್ಣ ನಿಂಗರಾಜು ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದ ಕುಪಿತನಾದ ನಿಂಗರಾಜು ತಮ್ಮನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ADVERTISEMENT

ಘಟನೆಯ ವಿವರ

ಮಾಯಪ್ಪನಹಳ್ಳಿ ಗ್ರಾಮದ ನಿಂಗಯ್ಯ ಮತ್ತು ದುಂಡಮ್ಮ ದಂಪತಿಗೆ ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಈ ಪೈಕಿ ನಿಂಗರಾಜು ಮೊದಲ ಮಗ, ಕೆಂಪೇಗೌಡ ಎರಡನೇ ಹಾಗೂ ಯೋಗೇಶ್ ಕೊನೆಯ ಮಗ. ಕುಟುಂಬಕ್ಕೆ 19 ಎಕರೆ ಜಮೀನು ಇತ್ತು. ತಂದೆ ನಿಧನದ ಬಳಿಕ ನಿಂಗರಾಜು ವ್ಯವಹಾರ ನೋಡಿಕೊಳ್ಳುತ್ತಿದ್ದನು.

ಆದರೆ, ಸಹೋದರ ಹಾಗೂ ಸಹೋದರಿಯರಿಗೆ ಆಸ್ತಿ ಕೊಡದೇ ಪಿತ್ರಾರ್ಜಿತ ಆಸ್ತಿ 12 ಎಕರೆ ಹಾಗೂ ತಾಯಿ ಹೆಸರಿನಲ್ಲಿ ಖರೀದಿಯಾಗಿದ್ದ 6 ಎಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದನೆಂಬ ಆರೋಪ ಕೇಳಿಬಂದಿದೆ.‌

ಆಸ್ತಿ ಜತೆಗೆ ಮೈಸೂರು, ಮಂಡ್ಯದಲ್ಲಿ 4 ನಿವೇಶನಗಳನ್ನೂ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದನು. ಬಳಿಕ ಎಲ್ಲ ಆಸ್ತಿಯನ್ನು ತನ್ನ ಪತ್ನಿ ಹೆಸರಿಗೆ ವರ್ಗಾವಣೆ ಮಾಡಿದ್ದನೆಂದು ಹೇಳಲಾಗಿದೆ. ಈ ಕುರಿತು ಪ್ರಶ್ನೆ ಮಾಡಿದಾಗ ಸಹೋದರ, ಸಹೋದರಿಯರ ವಿರುದ್ಧ ತಿರುಗಿ ಬಿದ್ದಿದ್ದಾನೆ. ಮಾತ್ರವಲ್ಲದೆ ಆಸ್ತಿ ವಿಚಾರವಾಗಿ ಎರಡು ಮೂರು ಬಾರಿ ಗಲಾಟೆಯಾಗಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ. ತಿಮ್ಮಯ್ಯ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸಿಪಿಐ ಎಂ.ಮಂಜುನಾಥ್, ಕೆರಗೋಡು ಠಾಣೆ ಪಿಐಎಸ್ ಕಾಶಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

28 ಬಾರಿ ಚಾಕುವಿನಿಂದ ಇರಿತ

ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ಬರೋಬ್ಬರಿ 28 ಬಾರಿ ಚಾಕುವಿನಿಂದ ಯೋಗೇಶ್‌ಗೆ ಇರಿಯಲಾಗಿದೆ ಎಂದು ತಿಳಿದುಬಂದಿದೆ.  ಯೋಗೇಶ್ ವ್ಯವಸಾಯ ಮಾಡಿಕೊಂಡು ಗ್ರಾಮದಲ್ಲಿ ಬದುಕು ಕಟ್ಟಿಕೊಂಡಿದ್ದ. ಜ.21ರಂದು ದೊಡ್ಡ ಹೊಸಗಾವಿ ಸಮೀಪದ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿವಾಹ ನಿಶ್ಚಯವಾಗಿತ್ತು. ಸಂಬಂಧಿಕರು ಹಾಗೂ ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನೂ ಹಂಚಲಾಗಿತ್ತು. ಹಸೆಮಣೆ ಏರಬೇಕಿದ್ದವ ಸ್ಮಶಾನಕ್ಕೆ ಹೋಗುವಂತಾಗಿದ್ದು ದುರಂತ ಎಂದು ಸಂಬಂಧಿಕರು ದುಃಖ ತೋಡಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.