ADVERTISEMENT

ಇಟ್ನಾಳ್‌ ಹೇಳಿಕೆಗೆ ಬಿಎಸ್‌ವೈ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 20:01 IST
Last Updated 3 ಮಾರ್ಚ್ 2019, 20:01 IST

ಮಂಡ್ಯ: ‘ಪಾಕಿಸ್ತಾನದ ಉಗ್ರರ ವಿರುದ್ಧ ಭಾರತ ಕೈಗೊಂಡ ಕ್ರಮಕ್ಕೆ ಕಾಂಗ್ರೆಸ್‌ ಶಾಸಕ ರಾಘವೇಂದ್ರ ಇಟ್ನಾಳ್‌ ಸಾಕ್ಷಿ ಕೇಳುತ್ತಾನೆ. ಸೈನಿಕರು ಕೈಗೊಂಡ ಕ್ರಮವನ್ನು ಹಗುರವಾಗಿ ಮಾತನಾಡಿದ್ದಾನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇಲ್ಲಿ ಭಾನುವಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಸತ್ತ ಉಗ್ರರ ಶವಗಳು ಎಲ್ಲಿವೆ ಎಂದು ಇಟ್ನಾಳ್‌ ಕೇಳಿದ್ದಾನೆ. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಗ್ರಗಾಮಿಗಳನ್ನು ಸದೆಬಡಿದಿರುವ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿರುವಾಗ ಕಾಂಗ್ರೆಸ್‌ ಶಾಸಕರು, ಅಧ್ಯಕ್ಷರು ಹಗುರವಾಗಿ ಮಾತನಾಡುತ್ತಿದ್ದಾರೆ’ ಎಂದರು.

‘ಉಗ್ರರ ಅಡಗುದಾಣಗಳನ್ನು ನಮ್ಮ ಸೈನಿಕರು ನಾಶಪಡಿಸಿದಾಗ ದೇಶವೇ ಸಂಭ್ರಮಾಚರಣೆ ಮಾಡಿತು. ಆದರೆ, ರಾಜ್ಯದಲ್ಲಿ ಸಂಭ್ರಮಾಚರಣೆ ಮಾಡಿದರೆ ಕೋಮುವಾದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಯುದ್ಧದಲ್ಲಿ ಗೆದ್ದಾಗ ಸಂಭ್ರಮಿಸದೇ ಸುಮ್ಮನೆ ಇರಬೇಕಾ? ಮುಖ್ಯಮಂತ್ರಿ ತಕ್ಷಣ ಜನರ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹಾಕದೆ ಸುಮಲತಾ ಅವರಿಗೆ ಬೆಂಬಲ ನೀಡುವ ಕುರಿತು ಪಕ್ಷದಿಂದ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ಹೇಳಿದರು.

ಇದಕ್ಕೂ ಮೊದಲು ಮೈಸೂರಿನಲ್ಲಿ ಮಾತನಾಡಿದ ಅವರು, ‘ರಾಜ್ಯ ಸಮ್ಮಿಶ್ರ ಸರ್ಕಾರವು ವರ್ಗಾವಣೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳ ವರ್ಗಾವಣೆ ವೇಳೆ ಜಾತಿಯನ್ನು ನೋಡುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.