ADVERTISEMENT

ಶ್ಯಾರಹಳ್ಳಿ ಕಾಲುವೆ ಏರಿಗೆ ಬೇಕು ತಡೆಗೋಡೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 17:26 IST
Last Updated 6 ಡಿಸೆಂಬರ್ 2018, 17:26 IST
ಕೆ.ಆರ್.ಪೇಟೆ ತಾಲ್ಲೂಕಿನ ಶ್ಯಾರಹಳ್ಳಿ ಬಳಿ ನಾಲೆ ಏರಿಗೆ ತಡೆಗೋಡೆ ಇಲ್ಲ
ಕೆ.ಆರ್.ಪೇಟೆ ತಾಲ್ಲೂಕಿನ ಶ್ಯಾರಹಳ್ಳಿ ಬಳಿ ನಾಲೆ ಏರಿಗೆ ತಡೆಗೋಡೆ ಇಲ್ಲ   

ಕೆ.ಆರ್.ಪೇಟೆ: ತಾಲ್ಲೂಕಿನ ಕೈಗೋನಹಳ್ಳಿ – ಸಾರಂಗಿ –ಗೊರವಿ ಮಾರ್ಗದಲ್ಲಿ ಅಘಲಯಕ್ಕೆ ಹೋಗುವ ಹಾದಿಯಲ್ಲಿ ಶ್ಯಾರಹಳ್ಳಿಯ ಬಳಿ ಹೇಮಾವತಿ ನಾಲೆಯ ಏರಿಗೆ ತಡೆಗೋಡೆ ಇಲ್ಲವಾಗಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ.

ಈ ಮಾರ್ಗದಲ್ಲಿ ಸರ್ಕಾರಿ ಬಸ್ ಅಘಲಯದ ಸಮೀಪ ಇರುವ ನಾರಾಯಣಪುರಕ್ಕೆ ನಿತ್ಯವೂ ಸಂಚರಿಸುತ್ತದೆ.

ಸಾರಂಗಿ, ಮಾಚಹಳ್ಳಿ, ಶ್ಯಾರಹಳ್ಳಿ, ಹೆತ್ತಗೋನಹಳ್ಳಿ, ಗೊರವಿ ಮಾರ್ಗವಾಗಿ ನಾರಾಯಣಪುರದವರೆಗೆ ಸಂಚರಿಸುವ ಈ ಬಸ್ಸಿನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಾರೆ.

ADVERTISEMENT

‘ನಾಲೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ಎಂಬುದು ಶ್ಯಾರಹಳ್ಳಿ, ಸಾರಂಗಿ, ಗೊರವಿ ಗ್ರಾಮಸ್ಥರ ಬಹುದಿನಗಳ ಬೇಡಿಕೆ. ಆದರೆ ಇವರ ಬೇಡಿಕೆ ಅಧಿಕಾರಿಗಳ ಕಿವಿಗೆ ಕೇಳುತ್ತಲೇ ಇಲ್ಲ’ ಎಂದು ದೂರುತ್ತಾರೆ ಗ್ರಾಮಸ್ಥರಾದ ರಾಮೇಗೌಡ.

‘ಈಚೆಗೆ ಪಾಂಡವಪುರ ತಾಲ್ಲೂಕಿನ ಕನಗನಮರಡಿಯಲ್ಲಿ ನಡೆದ ಬಸ್ ದುರಂತದಿಂದಾಗಿ ಭಯದ ವಾತಾವರಣ ಉಂಟಾಗಿದೆ’ ಎನ್ನುತ್ತಾರೆ ಪ್ರಯಾಣಿಕ ಜಗದೀಶ್. ‘ಈ ದಾರಿಯ ಒಂದು ಭಾಗದಲ್ಲಿ ನೀರಿನಿಂದ ತುಂಬಿರುವ ಕಾಲುವೆ, ಮತ್ತೊಂದು ಭಾಗದಲ್ಲಿ ಆಳವಾದ ಹಳ್ಳವಿದೆ. ರಸ್ತೆಗೆ ತಡೆಗೋಡೆ ಇಲ್ಲ. ರಸ್ತೆ ಕಿರಿದಾಗಿದ್ದು ಆಟೊ ಪ್ರಯಾಣಿಸಲು ಯೋಗ್ಯವಿಲ್ಲದಂತಾಗಿದೆ’ ಎನ್ನುತ್ತಾರೆ ಅವರು.

‘ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ತಡೆಗೋಡೆ ನಿರ್ಮಿಸಲು ಚಿಂತಿಸಬೇಕು. ಅಪಘಾತವಾದ ನಂತರ ಕ್ರಮ ಕೈಗೊಳ್ಳುವ ಬದಲು ಈಗಲೇ ಕ್ರಮ ವಹಿಸಿ ರಸ್ತೆ ದುರಸ್ತಿಗೊಳಿಸಿದರೆ ಸಾರ್ವಜನಿಕರು ನಿರಾಳವಾಗಿ ಪ್ರಯಾಣಿಸಬಹುದು’ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.