ADVERTISEMENT

ಕೆಆರ್‌ಎಸ್‌ ಬೃಂದಾವನ: ಕಾವೇರಿ ಆರತಿಗೆ ಸಿದ್ಧತೆ ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 3:21 IST
Last Updated 20 ಸೆಪ್ಟೆಂಬರ್ 2025, 3:21 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನ ಬೃಂದಾವನದ ಬಳಿ ಕಾವೇರಿ ಆರತಿ ಮಾಡಲು ಅಟ್ಟಣಿಗೆ ಕಟ್ಟುತ್ತಿರುವುದು
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನ ಬೃಂದಾವನದ ಬಳಿ ಕಾವೇರಿ ಆರತಿ ಮಾಡಲು ಅಟ್ಟಣಿಗೆ ಕಟ್ಟುತ್ತಿರುವುದು   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆ ಬಳಿ ಕಾವೇರಿ ಆರತಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆಆರ್‌ಎಸ್‌ ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ಕಾವೇರಿ ಆರತಿ ಮಾಡಲು ಅವಕಾಶ ನೀಡಬಾರದು ಎಂದು ರೈತಸಂಘ ನ್ಯಾಯಾಲಯದ ಮೊರೆ ಹೋಗಿರುವ ನಡುವೆಯೂ ಕಾವೇರಿ ಆರತಿಗೆ ಸಿದ್ದತೆ ನಡೆಸುತ್ತಿದೆ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ. ‘ಬೃಂದಾವನದ ದೋಣಿ ವಿಹಾರ ಕೇಂದ್ರದ ಬಳಿ ಕಾವೇರಿ ಆರತಿ ಕಾರ್ಯಕ್ರಮಕ್ಕಾಗಿ ಮೂರು ದಿನಗಳಿಂದ ಸಿದ್ಧತೆ ನಡೆಯುತ್ತಿವೆ. ನದಿಗೆ ಹೊಂದಿಕೊಂಡ ಜಾಗದಲ್ಲಿ  ಅಟ್ಟಣಿಗೆ ನಿರ್ಮಾಣವಾಗುತ್ತಿದೆ. ಕಾವೇರಿ ಆರತಿ ನಡೆಸಲು ಇಷ್ಟೆಲ್ಲಾ ನಡೆಯುತ್ತಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಪ್ರತಿ ವರ್ಷದಂತೆ ಈ ವರ್ಷ ಕೂಡ ದಸರಾ ಉತ್ಸವದ ಹಿನ್ನೆಲೆಯಲ್ಲಿ, ಬೃಂದಾವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯುತ್ತವೆ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವೇದಿಕೆ ನಿರ್ಮಾಣ ಹಾಗೂ ವಿದ್ಯುತ್‌ ದೀಪಾಲಂಕಾರದ ಕೆಲಸ ನಡೆಯುತ್ತಿವೆ. ಬೃಂದಾವನದಲ್ಲಿ ಕಾವೇರಿ ಆರತಿ ನಡೆಸುವುದಿಲ್ಲ. ಇದುವರೆಗೆ ಯಾವುದೇ ಸೂಚನೆ ಬಂದಿಲ್ಲ’ ಎಂದು ಕಾವೇರಿ ನೀರಾವರಿ ನಿಗಮ ಎಇಇ ಫಾರೂಕ್‌ ಅಬು ತಿಳಿಸಿದ್ದಾರೆ.

ADVERTISEMENT

‘ದಸರಾ ಕಾರ್ಯಕ್ರಮಗಳಿಗೆ ಇಷ್ಟು ವರ್ಷ ಕೆಆರ್‌ಎಸ್‌ ಬೃಂದಾವನದಲ್ಲಿ ಮಾತ್ರ ಸಿದ್ದತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ದೋಣಿ ವಿಹಾರ ಕೇಂದ್ರದ ಬಳಿ ಕೂಡ ಅಟ್ಟಣಿಗೆ ನಿರ್ಮಿಸಲಾಗುತ್ತಿದೆ. ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣವೂ ನಡೆಯುತ್ತಿದೆ. ಇದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಕೆಆರ್‌ಎಸ್‌ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಕೆಆರ್‌ಎಸ್‌ನ ಬೃಂದಾವನದ ಬಳಿ ಕಾವೇರಿ ಆರತಿ ಮಾಡುವ ಸಂಬಂಧ ನ್ಯಾಯಾಲಯದ ತಡೆಯಾಜ್ಞೆ ಇದೆ. ಇಷ್ಟಾದರೂ ಅಧಿಕಾರಿಗಳು ಕದ್ದು ಮುಚ್ಚಿ ಕಾವೇರಿ ಆರತಿಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಕೇಳಿದವರಿಗೆ ಸಬೂಬು ಹೇಳುತ್ತಿದ್ದಾರೆ. ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ಕಾವೇರಿ ಆರತಿ ನಡೆಸಲು ಅವಕಾಶ ನೀಡಬಾರದು’ ಎಂದು ಅವರು ಹೇಳಿದ್ದಾರೆ.

‘ಕೆಆರ್‌ಎಸ್‌ ಬಳಿ ಕಾವೇರಿ ಆರತಿ ಮಾಡಲು ನ್ಯಾಯಾಲಯ ತಡೆ ನೀಡಿದೆ. ಹಾಗಾಗಿ ಅಲ್ಲಿ ಕಾವೇರಿ ಆರತಿ ನಡೆಸಲು ಸಾಧ್ಯವಿಲ್ಲ. ಕದ್ದುಮುಚ್ಚಿ ಮಾಡಿದರೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌. ಕೆಂಪೂಗೌಡ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.