ADVERTISEMENT

ಕಾವೇರಿ ಆರತಿ | ದೇವರಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ಬೇಕೆ?: ಡಿ.ಕೆ.ಶಿವಕುಮಾರ್

ನೀಲನಕ್ಷೆಯನ್ನೊಳಗೊಂಡ ವಿಡಿಯೊ ಪ್ರದರ್ಶನ: ‘ಕಾವೇರಿ ಆರತಿ’ಯ ಸಂದೇಶ ನೀಡಿದ ಡಿಸಿಎಂ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:44 IST
Last Updated 30 ಜೂನ್ 2025, 13:44 IST
   

ಕೆಆರ್‌ಎಸ್‌ (ಮಂಡ್ಯ): ‘ಕಾವೇರಿ ಆರತಿ’ಯ ನೀಲನಕ್ಷೆಯನ್ನೊಳಗೊಂಡ 2 ನಿಮಿಷದ ವಿಡಿಯೊವನ್ನು ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಸಲ್ಲಿಸುವ ವೇದಿಕೆ ಕಾರ್ಯಕ್ರಮದಲ್ಲಿ ಪ್ರಸಾರ ಮಾಡುವ ಮೂಲಕ ಎಷ್ಟೇ ವಿರೋಧವಿದ್ದರೂ, ನಾವು ‘ಕಾವೇರಿ ಆರತಿ’ ಕಾರ್ಯಕ್ರಮ ಮಾಡಿಯೇ ತೀರುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ರೈತ ಸಂಘದ ಹೋರಾಟಗಾರರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ರವಾನಿಸಿದರು.

‘ಕಾವೇರಿ ತುಂಬಿದ್ದಾಳೆ, ರೈತರು ನಲಿದಿದ್ದಾರೆ. ಕಾವೇರಿ ಒಲಿದಿದ್ದಾಳೆ ಬರ ಓಡಿಸಿದ್ದಾಳೆ. ನಮ್ಮೆಲ್ಲರ ಪ್ರಾರ್ಥನೆಗೆ, ನಿಮ್ಮೆಲ್ಲರ ಆರತಿಗೆ ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ಕಾವೇರಿ ತುಂಬಿದರೆ ಶಾಂತಿ, ಕಾವೇರಿ ಹರಿದರೆ ಸಂತೃಪ್ತಿ’ ಎಂದು ಕವನ ವಾಚನ ಮಾಡುವ ಮೂಲಕ ಡಿ.ಕೆ. ಶಿವಕುಮಾರ್‌ ಮಾತು ಆರಂಭಿಸಿದರು.

‘ಕಾವೇರಿ ಆರತಿಗೆ ಅಡ್ಡಿಪಡಿಸಬೇಡಿ. ವಿರೋಧ ಮಾಡಲೇಬೇಕು ಎಂಬ ಕಾರಣಕ್ಕೆ ವಿರೋಧಿಸಬೇಡಿ. ಸಹಕಾರ ‌ನೀಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ. ನೀರಿಗೆ ಜಾತಿ, ಧರ್ಮವಿಲ್ಲ. ನೀರನ್ನು ಪೂಜೆ ಮಾಡುವುದು ನಮ್ಮ ಸಂಸ್ಕೃತಿ. ಪ್ರಯತ್ನಕ್ಕೆ ಸೋಲಾಗಬಹುದು ಪ್ರಾರ್ಥನೆಗೆ ಸೋಲಾಗುವುದಿಲ್ಲ. ನನ್ನ ಮಾತುಗಳು ನೇರ, ದಿಟ್ಟವಾಗಿ ಇರಬಹುದು ಯಾರೂ ಸಹ ಅನ್ಯತಾ ಭಾವಿಸಬಾರದು’ ಎಂದರು.

ADVERTISEMENT

‘ಅಣೆಕಟ್ಟಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಕಾವೇರಿ ಆರತಿ ಜಾಗ ನಿಗದಿ ಮಾಡಿದ್ದೇವೆ. ದೇವರಿಗೆ ಪ್ರಾರ್ಥನೆ ಮಾಡಲು ಅರ್ಜಿ ಹಾಕಬೇಕೆ? ಯಾರದ್ದಾದರೂ ಅನುಮತಿ ಬೇಕೆ? ಬೆಂಗಳೂರಿನಲ್ಲಿ ಜಲಮಂಡಳಿಯಿಂದ ನಡೆಸಿದ ಕಾವೇರಿ ಆರತಿಗೆ 25 ಸಾವಿರ ಜನ ಸೇರಿದ್ದರು. ಇಲ್ಲಿ ಕಾವೇರಿ ಆರತಿ ನಡೆಸಿದರೆ ಮಂಡ್ಯ, ಮೈಸೂರು ಭಾಗದ 1,500 ಜನರಿಗೆ ಉದ್ಯೋಗ ದೊರಕುತ್ತದೆ. ಬೃಂದಾವನ ಉದ್ಯಾನ ಅಭಿವೃದ್ಧಿ ಮಾಡಿದರೆ 3 ಸಾವಿರ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ’ ಎಂದು ಹೇಳಿದರು.

‘ಬೃಂದಾವನ ಉದ್ಯಾನವನ್ನು ಅತ್ಯಂತ ಆಕರ್ಷಣೀಯಗೊಳಿಸುವುದು ನಮ್ಮ ಉದ್ದೇಶ. ಮೈಸೂರು ದಸರಾ ರೀತಿ ಅತ್ಯುತ್ತಮ ದೀಪಾಲಂಕಾರ ಮಾಡಲಾಗುವುದು. ಅತ್ಯುತ್ತಮ ಕಾರಂಜಿ ಮತ್ತು ವಿದೇಶಗಳಿಂದ ಆಲಂಕಾರಿಕ‌ ಸಸ್ಯಗಳನ್ನು ತರಿಸಲಾಗಿದೆ.‌ ಸಿಎಂ ಅವರು ಇದನ್ನು ಅತ್ಯುತ್ತಮ ಪ್ರವಾಸಿ ಕೇಂದ್ರ ಮಾಡಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಖಾಸಗಿಯವರು ಬಂಡವಾಳ ಹೂಡಬಹುದು ಎಂದು ಆಹ್ವಾನ ಮಾಡಿದ್ದೇವೆ’ ಎಂದರು.

‘ಡ್ಯಾಂ ಗೇಟ್‌ಗಳ ದುರಸ್ತಿಗೆ ತಾಂತ್ರಿಕ ಸಮಿತಿ ರಚನೆ’

‘ರಾಜ್ಯದ ಅಣೆಕಟ್ಟುಗಳ ಗೇಟುಗಳನ್ನು ದುರಸ್ತಿಗೊಳಿಸಲು ಈಗಾಗಲೇ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದ್ದೇವೆ. ಆ ಸಮಿತಿಯಿಂದ ವರದಿ ತೆಗೆದುಕೊಂಡು ಹಂತ– ಹಂತವಾಗಿ ದುರಸ್ತಿ ಮಾಡಿಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ತುಂಗಾಭದ್ರಾ ಅಣೆಕಟ್ಟಿನ ಗೇಟ್ ಒಡೆದು ಹೋದಾಗ ಪ್ರತಿಪಕ್ಷಗಳು ಇಲ್ಲ ಸಲ್ಲದ ಟೀಕೆ ಮಾಡಿದರು. ಇಡೀ ಡ್ಯಾಂ ಒಡೆದು ಹೋಗುತ್ತದೆ ಎಂದು ಆರೋಪ ಮಾಡಿದರು. ನಾವು ತಕ್ಷಣ ತೀರ್ಮಾನ ತೆಗೆದುಕೊಂಡು ಆ ಗೇಟ್ ಅನ್ನು ದುರಸ್ತಿಗೊಳಿಸಿ ರೈತರ ಎರಡನೇ ಬೆಳೆಗೂ ನೀರು ನೀಡಿದ ಇತಿಹಾಸ ಈ ಕಾಂಗ್ರೆಸ್ ‌ಸರ್ಕಾರಕ್ಕಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.