ADVERTISEMENT

'ಕಾವೇರಿ ಆರತಿ' ವಿರೋಧಿಸಿ ರೈತರಿಂದ ಪ್ರತಿಭಟನೆ: ವಿರೋಧದ ನಡುವೆ ಅದ್ದೂರಿ ಸಮಾರಂಭ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 13:56 IST
Last Updated 26 ಸೆಪ್ಟೆಂಬರ್ 2025, 13:56 IST
<div class="paragraphs"><p>ರೈತರಿಂದ ಪ್ರತಿಭಟನೆ</p></div>

ರೈತರಿಂದ ಪ್ರತಿಭಟನೆ

   

ಕೆ.ಆರ್.ಎಸ್ (ಮಂಡ್ಯ ಜಿಲ್ಲೆ): ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆ ಬಳಿ ಶುಕ್ರವಾರದಿಂದ ಆರಂಭಗೊಂಡ ‘ಕಾವೇರಿ ಆರತಿ’ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ರೈತ ಸಂಘ, ವಿವಿಧ ಕನ್ನಡ ಪರ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಅಣೆಕಟ್ಟೆಯ ಸೌತ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು.

ಶುಕ್ರವಾರ ಮಧ್ಯಾಹ್ನ ಮಂಡ್ಯ ನಗರದ ಸರ್‌ಎಂ.ವಿ. ಪ್ರತಿಮೆಯಿಂದ ಕೆಆರ್‌ಎಸ್‌ ಕಡೆಗೆ ಬಸ್‌ಗಳಲ್ಲಿ ಪ್ರತಿಭಟನಾಕಾರರು ಬಂದರು.

ADVERTISEMENT

ನಂತರ ಕೆ ಆರ್ ಎಸ್ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ಪ್ರತಿಭಟನೆಯ ರೂಪುರೇಷೆ ಕುರಿತು ಚರ್ಚಿಸಿದರು. ಅಲ್ಲಿಂದ ಡ್ಯಾಂನ ಸೌತ್ ಗೇಟ್ ಬಳಿ ಧಾವಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್‌ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣ, ಕಾವೇರಿ ಆರತಿ ಯೋಜನೆ ಮಾಡುವುದಕ್ಕೆ ಹಿಂದಿನಿಂದಲೂ ವಿರೋಧ ಮಾಡುತ್ತಲೇ ಬಂದಿದ್ದೇವೆ. ಅಲ್ಲಿ ಕಾವೇರಿ ಆರತಿ ಮಾಡುವ ಮೂಲಕ ಮೂಢನಂಬಿಕೆ ಬಿತ್ತಲು ಹೊರಟಿರುವುದು ನಾಚಿಕೆಗೇಡು. ಡ್ಯಾಂ ಸುರಕ್ಷತೆಗೆ ಧಕ್ಕೆ ತರುವುದರಿಂದ ಕಾವೇರಿ ಆರತಿಯನ್ನು ಪ್ರಾಯೋಗಿಕವಾಗಿಯೂ ಮಾಡಬಾರದು ಎಂದು ಆಗ್ರಹಿಸಿದರು.

ಕೆಆರ್‌ಎಸ್‌ ಅಣೆಕಟ್ಟು ಇತಿಹಾಸ ಹೊಂದಿರುವ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕೊಡುಗೆ ಆಗಿದೆ. ಶತಮಾನದ ಅಂಚಿನಲ್ಲಿರುವ ಅಣೆಕಟ್ಟೆ ಭದ್ರತೆಗೆ ಕಾನೂನು ರೂಪಿಸಿರುವ ಸರ್ಕಾರವೇ ಕಾನೂನು ಉಲ್ಲಂಘಿಸಿರುವುದು ದುರಂತ. ಈ ಎರಡು ವಿಚಾರವನ್ನು ನ್ಯಾಯಾಲಯದ ಮೂಲಕವೇ ಉತ್ತರಿಸಲು ನಿರ್ಧರಿಸಿದ್ದೇವೆ. ಅಧಿಕಾರದ ದರ್ಪದಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ಯೋಜನೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಕೆಆರ್‌ಎಸ್‌ ಅಣೆಕಟ್ಟೆ ಬಳಿಯೇ ಇವೆಲ್ಲವನ್ನೂ ಮಾಡಲು ಒಪ್ಪಿಗೆ ಕೊಟ್ಟಿದ್ದು ಯಾರು? ಇವರು ಖಾಸಗಿಯಾಗಿ ಹಣ ಸಂಪಾದನೆ ಮಾಡುವ ದಾರಿಯೇ? ಯಾರ ಮೇಲೆ ದರ್ಪ ಮಾಡಲು ಹೊರಟಿದ್ದಾರೆ? ಇಲ್ಲಿ ಬಂದಿರುವ ರೈತರು ಸ್ವಇಚ್ಛೆಯಿಂದ ಬಂದಿದ್ದಾರೆ. ಯಾರಿಗೂ ಹಣ ಕೊಟ್ಟು ಕರೆದುಕೊಂಡು ಬಂದಿಲ್ಲ ಎಂದು ಗುಡುಗಿದರು.

ಅಣೆಕಟ್ಟೆ ಬಳಿ ಸಾವಿರಾರು ಜನ ಸೇರುವುದರಿಂದ ಜಲ, ಶಬ್ದ, ವಾಯು ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು ಹೊಣೆ ಆಗುತ್ತಾರೆ. ಹೈಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಎ.ಎಲ್.ಕೆಂಪೂಗೌಡ, ಇಂಡುವಾಳು ಚಂದ್ರಶೇಖರ್‌, ಸಿ.ಕುಮಾರಿ, ಶಿವಳ್ಳಿ ಚಂದ್ರು, ಮುದ್ದೇಗೌಡ, ನಾಗಣ್ಣ, ಪ್ರಭುಲಿಂಗ ಭಾಗವಹಿಸಿದ್ದರು.

ಸರ್ಕಾರಕ್ಕೆ ಜನರೇ ಹಾಲು–ತುಪ್ಪ ಬಿಡ್ತಾರೆ

ಕಾವೇರಿ ಆರತಿ ಮಾಡುವುದಕ್ಕೆ ಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ, ಈ ಕಾಂಗ್ರೆಸ್‌ ಸರ್ಕಾರಕ್ಕೆ ಏನಾಗಿದೆಯೋ ಗೊತ್ತಿಲ್ಲ. ಮೂರನೇ ಬೀದಿಯಲ್ಲಿ ಮೆರವಣಿಗೆ ಬೇಡ ನಾಲ್ಕನೆ ಬೀದಿಯಲ್ಲಿ ಮೆರವಣಿಗೆ ಹೋಗೋಣ ಎನ್ನುವ ಹಾಗೆ ಮಾನ ಮರ್ಯಾದೆ ಇಲ್ಲದವರಂತೆ ನಡೆದುಕೊಳ್ಳುತ್ತಿದೆ ಎಂದು ಮಾಜಿ ಸವಿವ ಸಿ.ಎಸ್‌.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ಪುಣ್ಯಾತ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತನ್ನ ಪತ್ನಿಯ ಒಡವೆ ಅಡವಿಟ್ಟು ಅಣೆಕಟ್ಟೆ ಕಟ್ಟಿಸಿಕೊಟ್ಟಿದ್ದಾರೆ. ಡ್ಯಾಂ ಬಳಿಯೇ ಕಾವೇರಿ ಆರತಿ ಮಾಡಬೇಕಾ, ನದಿ ಹರಿಯುವ ಕಡೆ ಆರತಿ ಮಾಡಿದರೆ ಏನು ಇವರಿಗೆ ಕಷ್ಟ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರದ ಆಡಳಿತದಲ್ಲಿ ಸಾವಿರಾರು ಕಾರ್ಯಕ್ರಮ ಮಾಡಿದ್ದೇವೆ, ಇವರು ಮಾಡುತ್ತಿರುವುದು ದುಡ್ಡಿಗಾಗಿ. ಗುಂಡಿ ಬಿದ್ದ ರಸ್ತೆಯಲ್ಲಿ ಜನರು ಸಂಚರಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಒಟ್ಟಿನಲ್ಲಿ ಕಾಂಗ್ರೆಸ್‌ ಜನರಿಗೆ ತಿಥಿ ಹಾಲುತುಪ್ಪ ಬಿಡಲು ಮುಂದಾಗಿದೆ. ಆದರೆ ಜನರೇ ಇವರಿಗೆ ಹಾಲುತುಪ್ಪು ಬಿಡುತ್ತಾರೆ ಎಂದು ಗುಡುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.