ADVERTISEMENT

ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ: ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರ ನಿಷೇಧ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 16:24 IST
Last Updated 18 ಆಗಸ್ಟ್ 2025, 16:24 IST
   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಕೆಆರ್‌ಎಸ್‌ ಜಲಾಶಯದಿಂದ ಸೋಮವಾರ 80 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಹರಿಯಬಿಡಲಾಗಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಪಟ್ಟಣದ ಪಶ್ಚಿಮವಾಹಿನಿ, ಜಿ.ಬಿ. ಗೇಟ್‌, ಸ್ನಾನಘಟ್ಟ, ಗಂಜಾಂ ಬಳಿಯ ದೊಡ್ಡ ಗೋಸಾಯಿಘಾಟ್‌, ಚಿಕ್ಕ ಗೋಸಾಯಿಘಾಟ್‌ ಬಳಿಯ ಐತಿಹಾಸಿಕ ದೇವಾಲಯಗಳು ಭಾಗಶಃ ಮುಳುಗಡೆಯಾಗಿವೆ. ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿಯ ಆಂಜನೇಯಸ್ವಾಮಿ ದೇವಾಲಯ ಅರ್ಧದಷ್ಟು ಜಲಾವೃತವಾಗಿದೆ. ಗಂಜಾಂನ ನಿಮಿಷಾಂಬ ದೇವಾಲಯ ಮತ್ತು ಕಾವೇರಿ ಸಂಗಮದ ಬಳಿ ನದಿ ತೀರದ ಮೆಟ್ಟಿಲುಗಳು ಮುಳುಗಿವೆ. ಪಟ್ಟಣದ ಸಾಯಿಬಾಬಾ ಆಶ್ರಮದ ಒಳಕ್ಕೆ ನೀರು ನುಗ್ಗಿದೆ.

ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯ ತಳಕ್ಕೆ ನೀರು ತಾಕುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆ ಮೇಲೆ ವಾಹನ ಮತ್ತು ಜನ ಸಂಚಾರ ನಿಷೇಧಿಸಲಾಗಿದೆ. ಸೇತುವೆಯ ಎರಡೂ ದ್ವಾರಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ತಾಲ್ಲೂಕಿನ ಬಾಬುರಾಯನಕೊಪ್ಪಲು, ಶ್ರೀನಿವಾಸ ಅಗ್ರಹಾರ, ಚಿಕ್ಕಪಾಳ್ಯ, ಹಂಗರಹಳ್ಳಿ, ಮಹದೇವಪುರ, ಕಾರೇಕುರ, ಮಂಡ್ಯಕೊಪ್ಪಲು, ಮೇಳಾಪುರ ಬಳಿ ನದಿ ತೀರದ ಕೃಷಿ ಜಮೀನುಗಳು ಜಲಾವೃತವಾಗಿವೆ.

ADVERTISEMENT

ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಪಾದಚಾರಿ ಮಾರ್ಗಕ್ಕೆ ನೀರು ನುಗ್ಗಿದೆ. ಟಿಕೆಟ್‌ ಕೌಂಟರ್‌ ಬಳಿಯ ರಸ್ತೆಯಲ್ಲಿ ನೀರು ಹರಿಯುತ್ತಿದೆ.

ಜಲ ದಿಗ್ಬಂಧನ: ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಸಮೀಪ ಇರುವ ಗೌತಮ ಕ್ಷೇತ್ರದ ದ್ವೀಪದ ಸಂಪರ್ಕ ಕಡಿತವಾಗಿದೆ. ಈ ನಡುಗಡ್ಡೆಯಲ್ಲಿ ಗಜಾನನ ಸ್ವಾಮೀಜಿ ಸೇರಿದಂತೆ ನಾಲ್ವರು ಇದ್ದು, ಜಲ ದಿಗ್ಬಂಧನ ಉಂಟಾಗಿದೆ. ಸದ್ಯ ಆಹಾರ, ನೀರು, ವಿದ್ಯುತ್‌ಗೆ ಸಮಸ್ಯೆ ಇಲ್ಲ ಎಂದು ಗಜಾನನ ಸ್ವಾಮೀಜಿ ತಿಳಿಸಿದ್ದಾರೆ.

ನದಿಯಲ್ಲಿ ನೀರಿನ ಮಟ್ಟ ಗಂಟೆ ಗಂಟೆಗೂ ಹೆಚ್ಚುತ್ತಿದ್ದು, ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪಟ್ಟಣ, ಕೆಆರ್‌ಎಸ್‌ ಹಾಗೂ ಅರಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯ ನದಿ ತೀರದ ಗ್ರಾಮಗಳಲ್ಲಿ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.