ಭಾರತೀನಗರ: ಇಲ್ಲಿಯ ಹೊರವಲಯದಲ್ಲಿನ ಪ್ರಶಾಂತ್ ಶಾಲೆ ಬಳಿಯಿಂದ ಮದ್ದೂರು- ಮಳವಳ್ಳಿ ಹೆದ್ದಾರಿಯಲ್ಲಿ ಶನಿವಾರ ವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಶ್ರೀದೇವಿ- ಭೂದೇವಿಯರ ಮೂರ್ತಿಯನ್ನು ರಥದಲ್ಲಿ ಇರಿಸಿ ಹೂ-ಹೊಂಬಾಳೆ ಕಾರ್ಯ ನೆರವೇರಿಸಲಾಯಿತು.
ನಂತರ ಗಾರುಡಿಗೊಂಬೆ, ಡೊಳ್ಳುಕುಣಿತ, ಪೂಜಾಕುಣಿತ, ಚಿಲಿಪಿಲಿ ಗೊಂಬೆ, ವೀರಗಾಸೆ ಕುಣಿತದ ಮೆರವಣಿಗೆಯೊಂದಿಗೆ ದೇವಾಲಯದ ಆವರಣಕ್ಕೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಭಕ್ತಾಧಿಗಳು ಆರತಿ ಬೆಳಗಿ, ಪೂಜೆ ಸಲ್ಲಿಸಿದರು.
ದೇವಸ್ಥಾನದ ಮುಖ್ಯದ್ವಾರದಲ್ಲಿ ವೆಂಕಟೇಶ್ವರ ಸ್ವಾಮಿ , ಶ್ರೀದೇವಿ, ಭೂದೇವಿ ಮೂರ್ತಿಗೆ ಮಹಿಳೆಯರು ಕೆಂಪು ಮತ್ತು ಹಳದಿ ನೀರಿನ ಆರತಿ, ಬೆಲ್ಲದ ಆರತಿ ಬೆಳಗುವ ಮೂಲಕ ಉತ್ಸವ ಸ್ವಾಗತಿಸಿದರು. ಮಾರಿಗುಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ತರುವಾಯ ಗರ್ಭಗುಡಿಯಲ್ಲಿರುವ ವೆಂಕಟೇಶ್ವರ ಮೂರ್ತಿಗೆ ಹೂವಿನಿಂದ ಅಲಂಕರಿಸಲಾಯಿತು. ಉತ್ಸವ ಮೂರ್ತಿಗಳು, ಗರ್ಭಗುಡಿಯಲ್ಲಿನ ಮೂರ್ತಿಗಳಿಗೆ ಸಂಪ್ರದಾಯಬದ್ಧವಾಗಿ ಪೂಜಾ ಕೈಂಕರ್ಯ ನೆರವೇರಿದವು. ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ದೇವಾಲಯಕ್ಕೆ ಆಗಮಿಸಿದ್ದ 15 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಮೇಲುಕೋಟೆ ಸ್ಥಾನಾಚಾರ್ಯ ಶೆಲ್ವಪ್ಪಿಳ್ಳೈ ಅಯ್ಯಂಗಾರ್, ಅರ್ಚಕರಾದ ಗೋಪಾಲಕೃಷ್ಣ ಭಟ್ಟರ್, ಅನಂತಕೃಷ್ಣ ಭಟ್ಟರ್, ವೇದಬ್ರಹ್ಮ ಯು.ವಿ.ಗಿರೀಶ್ ನೇತೃತ್ವದಲ್ಲಿ ರಾತ್ರಿ 7 ಗಂಟೆಯವರೆಗೂ ಈ ಪೂಜಾ ಕೈಂಕರ್ಯಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.