ADVERTISEMENT

ರಾಜ್ಯಗಳ ಮೇಲೆ ಕೇಂದ್ರ ಸರ್ಕಾರದ ಸವಾರಿ: ಸಿದ್ದರಾಮಯ್ಯ

ರೈತ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 12:43 IST
Last Updated 10 ಅಕ್ಟೋಬರ್ 2020, 12:43 IST
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ರೈತರ ನಡುವೆ ಅಂತರ ಇಲ್ಲದಿರುವುದು
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ರೈತರ ನಡುವೆ ಅಂತರ ಇಲ್ಲದಿರುವುದು   

ಮಂಡ್ಯ: ‘ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಕುರಿತು ರಾಜ್ಯ ಸರ್ಕಾರಳಿಗೆ ಆದೇಶ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ರೈತಪರ ಕಾಯ್ದೆಗಳ ತಿದ್ದುಪಡಿ ಖಂಡಿಸಿ ಕೆಪಿಸಿಸಿ ಹಾಗೂ ರೈತ ಸಂಘಟನೆಗಳ ವತಿಯಿಂದ ಶನಿವಾರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಕಾರ್ಯದರ್ಶಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಶೀಘ್ರ ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ಸುಗ್ರೀವಾಜ್ಞೆ ತರಬೇಕು, ನಂತರ ತಿದ್ದುಪಡಿ ಕುರಿತ ವರದಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮೇಲೆ ಒತ್ತಡ ಹೇರುವ ಅಧಿಕಾರವನ್ನು ಇವರಿಗೆ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.

ADVERTISEMENT

ರಕ್ತಕ್ರಾಂತಿ: ‘ಮೋದಿ ಸರ್ಕಾರ ರಾಜ್ಯಗಳ ಅಧಿಕಾರದ ಮೇಲೆ ಮೂಗು ತೂರಿಸಿ, ಸ್ವಾಯತ್ತತೆ ಕಿತ್ತುಕೊಳ್ಳುವ ಯತ್ನ ಮಾಡುತ್ತಿದೆ. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವ ಯತ್ನ ಮಾಡಿದರೆ, ತಿದ್ದುಪಡಿಯ ಮಾತುಗಳನ್ನಾಡಿದರೆ ಈ ದೇಶದಲ್ಲಿ ರಕ್ತಕ್ರಾಂತಿಯಾಗಲಿದೆ’ ಎಂದು ಆಕ್ರೊಶ ವ್ಯಕ್ತಪಡಿಸಿದರು.

‘ಭೂಸುಧಾರಣಾ ಕಾಯ್ದೆ ತಿದ್ದುಪಡಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದಿದ್ದಾರೆ. ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ. ಮೊದಲು ಅವರು ಮುಖ್ಯಮಂತ್ರಿಯಾಗಿದ್ದಾಗ ಚೆಕ್‌ ಮೂಲಕ ಲಂಚ ಪಡೆದಿದ್ದರು. ಈಗ ಅವರ ಪುತ್ರ ಆರ್‌ಟಿಜಿಎಸ್‌ ಮೂಲಕ ಲಂಚ ಪಡೆದಿದ್ದಾರೆ’ ಎಂದು ಆರೋಪಿಸಿದರು.

‘2017ರಲ್ಲಿ ಎಪಿಎಂಸಿಯಲ್ಲಿ ನಾವು ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಿದ್ದೆವು. ನಮ್ಮ ಮಾದರಿ ಅನುಸರಿಸಿದ್ದ ಕೇಂದ್ರ ಸರ್ಕಾರ 2018ರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಆದರೆ ಈಗ ಎಪಿಎಂಸಿಗಳನ್ನೇ ನಾಶಪಡಿಸಲು ಹೊರಟಿರುವುದು ಅನುಮಾನಾಸ್ಪದವಾಗಿದೆ. ತಿದ್ದುಪಡಿ ಕಾಯ್ದೆಗಳನ್ನು ಧ್ವನಿಮತದಿಂದ ಪಾಸ್‌ ಮಾಡಬಹದು, ಆದರೆ ಜನಮತದಿಂದ ಪಾಸ್‌ ಮಾಡಲು ಸಾಧ್ಯವೇ ಇಲ್ಲ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ತಿದ್ದುಪಡಿ ಕಾಯ್ದೆಗಳ ವಿರುದ್ಧ ರಾಜ್ಯದಲ್ಲಿ 2 ಕೋಟಿ ಸಹಿ ಸಂಗ್ರಹಿಸಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು ಎಂದರು.

ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ₹ 25 ಲಕ್ಷ ಕೋಟಿ ವಹಿವಾಟು ನಡೆಸುವ ಕೃಷಿ ಕ್ಷೇತ್ರವನ್ನು ಕೆಲವೇ ಬಂಡವಾಳಶಾಹಿಗಳಿಗೆ ನೀಡಲಾಗುತ್ತಿದೆ. ದೇಶದಲ್ಲಿ ಬಿಜೆಪಿ ವಿರುದ್ಧ ರೈತರ ಹೋರಾಟ ನಡೆಯಬೇಕು ಎಂದರು.

ಕಾಂಗ್ರೆಸ್‌ ಚಿನ್ಹೆ ಇಲ್ಲದೆ ಕಾರ್ಯಕ್ರಮ ಸಂಪೂರ್ಣ ರೈತಮಯವಾಗಿತ್ತು. ಕಾಂಗ್ರೆಸ್‌ ಮುಖಂಡರು ಜನರ ಸಾಲಿನಲ್ಲಿ ಕುಳಿತು ರೈತ ಮುಖಂಡರ ವಿಚಾರ ಮಂಡನೆ ಆಲಿಸಿದರು. ಕೋವಿಡ್‌ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾದರು.

ಗುಜರಾತಿಗಳ ನಿಯಂತ್ರಣದಲ್ಲಿ ಪ್ರಧಾನಿ ಕಚೇರಿ

ಉಪನ್ಯಾಸ ನೀಡಿದ ಜನಶಕ್ತಿ ಸಂಘಟನೆ ರಾಜ್ಯ ಘಟಕದ ಸಂಚಾಲಕ ಡಾ.ವಾಸು ‘ಗುಜರಾತ್‌ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಬಂಡವಾಳಶಾಹಿಗಳ ನಿಯಂತ್ರಣಲ್ಲಿ ಪ್ರದಾನ ಮಂತ್ರಿ ಕಚೇರಿ ಸಿಕ್ಕಿಹಾಕಿಕೊಂಡಿದೆ’ ಎಂದರು.

‘ಚೀನಾ ರೇಷ್ಮೆ, ಬ್ರೆಜಿಲ್‌ ಸಕ್ಕರೆ ಆಮದು ಸುಂಕವನ್ನು ಕಡಿತಗೊಳಿಸಿದ ಪರಿಣಾಮದಿಂದಾಗಿ 2015ರಲ್ಲಿ ದೇಶದ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ರೈತಪರ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ’ ಎಂದರು.

ತಿದ್ದುಪಡಿ ಕಾಯ್ದೆಗಳಿಗೆ ಬೆಂಬಲ ನೀಡಿರುವ ಜೆಡಿಎಸ್‌ ಮುಖಂಡರು ಯಾವ ಸೀಮೆಯ ಮಣ್ಣಿನ ಮಕ್ಕಳು? ಇದರ ಬಗ್ಗೆ ಚರ್ಚೆ ನಡೆಯಬೇಕಿದೆ
–ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.