ಚಲುವರಾಯಸ್ವಾಮಿ
ಮಂಡ್ಯ: ‘ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಕುಮಾರಸ್ವಾಮಿ ಮಾತನಾಡಲಿ. ಬೆಳಗಾವಿ ಅಧಿವೇಶನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಪ್ರಶ್ನೆ ಮಾಡಲಿ, ನಾವು ಉತ್ತರ ಕೊಡಲು ಸಿದ್ಧವಿದ್ದೇವೆ. ಸತ್ಯ ಹರಿಶ್ಚಂದ್ರನ ರೀತಿ ಮಾತನಾಡುವ ಕುಮಾರಸ್ವಾಮಿಯವರು ಜನರು ಮತ್ತು ಮಾಧ್ಯಮದವರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ರೈತರ ಆತ್ಮಹತ್ಯೆ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿವೆ. ಆತ್ಮಹತ್ಯೆಗೆ ಹಲವಾರು ಕಾರಣಗಳು ಇರುತ್ತವೆ. ರೈತರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದಲೇ ನಮ್ಮ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ, ಪಂಚ ಗ್ಯಾರಂಟಿ, ಹಾಲಿಗೆ ಪ್ರೋತ್ಸಾಹಧನ ನೀಡುತ್ತಿದೆ ಎಂದರು.
‘ಕೇರಳದ ತಾಜೀರ್ ಎಂಬಾತ ನೆಲಮಂಗಲದ ಬಳಿಯ ಗೋದಾಮಿನಲ್ಲಿ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿ ತಮಿಳುನಾಡಿಗೆ ಸರಬರಾಜು ಮಾಡುತ್ತಿದ್ದ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಜಾಗೃತ ದಳದ ಅಧಿಕಾರಿಗಳು ₹88.67 ಲಕ್ಷ ಮೌಲ್ಯದ 190 ಮೆಟ್ರಿಕ್ ಟನ್ ಯೂರಿಯಾ ವಶಪಡಿಸಿಕೊಂಡಿದ್ದಾರೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಇಂತಹ ಪ್ರಕರಣಗಳು ಇದೇ ಮೊದಲಲ್ಲ, ಹಿಂದೆಯೂ ಸಹ ನಡೆದಿವೆ. ಕಳೆದ 3 ವರ್ಷಗಳಲ್ಲಿ ಅಕ್ರಮ ದಾಸ್ತಾನು ಮತ್ತು ಮಾರಾಟದ ಸಂಬಂಧ 22 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವರ್ಷ 7 ಪ್ರಕರಣ ದಾಖಲಿಸಿ, ₹64 ಲಕ್ಷ ದಂಡ ಹಾಕಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.