ಮಂಡ್ಯ: ಮೈಸೂರು ದಸರಾ ಉದ್ಘಾಟನೆ ವೇಳೆ ನಾಡದೇವಿ ಚಾಮುಂಡೇಶ್ವರಿಗೆ ಸಿಂಧೂರ, ಅರಿಶಿಣ– ಕುಂಕುಮ ಇಟ್ಟು, ಗಂಧದ ಕಡ್ಡಿ– ಕರ್ಪೂರ ಹಚ್ಚಿ, ಆರತಿ ಬೆಳಗುವರೇ?
ಲೇಖಕಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಈ ಪ್ರಶ್ನೆಯನ್ನು ಎತ್ತಿದ್ದಾರೆ.
ಅವರ (ಮುಸ್ಲಿಂ) ಧರ್ಮದಲ್ಲಿ ಮೂರ್ತಿ ಪೂಜೆಯನ್ನು ಮಾಡುವುದಿಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ಬಾನು ಅವರು ಚಾಮುಂಡಿ ತಾಯಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸುವುದಾದರೆ ನಾವು ಸ್ವಾಗತಿಸುತ್ತೇವೆ. ಈ ಬಗ್ಗೆ ಬಾನು ಅವರು ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ, ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು.
ನಾವು ಯಾವ ಜಾತಿ, ಮತ, ಪಂಥಗಳ ವಿರೋಧಿಗಳಲ್ಲ, ನಾವೆಲ್ಲರೂ ಭಾರತೀಯರು, ಹಿಂದೂ, ಕ್ರೈಸ್ತ, ಮುಸಲ್ಮಾನ, ಎಲ್ಲರನ್ನೂ ಪ್ರೀತಿಸುವವರು. ನಮ್ಮ ನಾಡಹಬ್ಬ ದಸರಾವು ಸಂಪ್ರದಾಯಬದ್ಧವಾಗಿ ನಡೆಯಬೇಕು ಎಂದು ಬಯಸುತ್ತೇವೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರೋಹಿಣಿ ಅವರಿಗೆ ಬಿಜೆಪಿ ಕಾರ್ಯಕರ್ತರು ಸೋಮವಾರ ಮನವಿ ಪತ್ರ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಶಿವಕುಮಾರ ಆರಾಧ್ಯ, ಶಿವಲಿಂಗಪ್ಪ, ಚಂದ್ರು, ಪ್ರಸನ್ನ ಕುಮಾರ್, ಯೋಗೇಶ್, ಷಣ್ಮಖ ಆರಾಧ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.