ADVERTISEMENT

ಮದ್ದೂರು: ಐಐಎಫ್ಎಲ್ ಸಿಬ್ಬಂದಿಯಿಂದ ವಂಚನೆ

ಸಂಸ್ಥೆ, ಗ್ರಾಹಕರಿಗೆ ವಂಚಿಸಿ ಚಿನ್ನಾಭರಣ, ಹಣದೊಂದಿಗೆ ಪರಾರಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 1:47 IST
Last Updated 8 ಜೂನ್ 2021, 1:47 IST
ಶಿವಶಂಕರ್
ಶಿವಶಂಕರ್   

ಮದ್ದೂರು: ಪಟ್ಟಣದ ಸಂಜಯ ಚಿತ್ರ ಮಂದಿರದ ಬಳಿ ಇರುವ ಐಐಎಫ್ಎಲ್ ಗೋಲ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯು ಸಂಸ್ಥೆ ಹಾಗೂ ಗ್ರಾಹಕರಿಗೆ ವಂಚಿಸಿ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನದ ಒಡವೆಗಳೊಂದಿಗೆ ಪರಾರಿಯಾಗಿದ್ದಾರೆ.

ತಾಲ್ಲೂಕಿನ ಕೆ.ಎಂ.ದೊಡ್ಡಿ ಸಮೀಪದ ಹನುಮಂತನಗರ ಬಳಿಯ ಕೆ.ಶೆಟ್ಟಹಳ್ಳಿ ಗ್ರಾಮದ ಶಿವಶಂಕರ್ ವಂಚಿಸಿರುವ ಆರೋಪಿ.

9 ವರ್ಷಗಳ ಹಿಂದೆ ಐಐಎಫ್ಎಲ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಸಂಸ್ಥೆಗೆ ಬರುವ ಗ್ರಾಹಕರಿಗೆ ವಂಚಿಸುತ್ತಿದ್ದರು. ಆರೋಪಿಯು ಕಣ್ಮರೆಯಾಗಿದ್ದರಿಂದ ಸಂಸ್ಥೆಯ ವ್ಯವಸ್ಥಾಪಕ ಮೋಹನ್ ಕುಮಾರ್ ನೀಡಿದ ದೂರಿನ ಮೇಲೆ ಮದ್ದೂರಿನ ಎಸ್.ಐ ನವೀನ್ ಗೌಡ ಅವರು ಸಂಸ್ಥೆ ಸಿಬ್ಬಂದಿಯೊಂದಿಗೆ ಭಾನುವಾರ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಸೋಮವಾರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಮೋಸ ಹೋದ ಗ್ರಾಹಕರು ಸಂಸ್ಥೆ ಮುಂದೆ ಬಂದಿದ್ದರು. ಸಂಸ್ಥೆಯ ಗ್ರಾಹಕರಾಗಿದ್ದವರನ್ನೇ ಪುಸಲಾಯಿಸಿ ವಂಚಿಸಿಸಲಾಗಿದೆ ಎನ್ನಲಾಗಿದ್ದು, ಪಟ್ಟಣದ ತ್ರಿವೇಣಿ ಎಂಬುವರು ಕಳೆದ ವಾರ ಸಂಸ್ಥೆಗೆ ಚಿನ್ನದ ಮೇಲೆ ಸಾಲ ಪಡೆಯಲು ಹೋದಾಗ ಸಾಲದ ಮೊತ್ತದಲ್ಲಿ ಅರ್ಧ ಹಣ (₹ 1.5 ಲಕ್ಷ) ನೀಡಿ ಉಳಿದ ಹಣವನ್ನು ಹಾಗೂ ಚೀಟಿಯನ್ನು ಸೋಮವಾರ ಕೊಡುವುದಾಗಿ ಶಿವಶಂಕರ್‌ ತಿಳಿಸಿದ್ದರು. ಸುಮಾರು 85ಗ್ರಾಂ ಚಿನ್ನಾಭರಣವನ್ನು ನೀಡಿರುವ ಮಹಿಳೆಯೂ ಮದ್ದೂರು ಠಾಣೆಗೆ ದೂರು ನೀಡಿದ್ದಾರೆ.

ಪಟ್ಟಣದ ವಿ.ವಿ.ನಗರ, ಲೀಲಾವತಿ ಬಡಾವಣೆ, ಚನ್ನೆಗೌಡನದೊಡ್ಡಿ ಸೇರಿ ದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಮಹಿಳೆಯರನ್ನೂ ವಂಚಿಸಲಾಗಿದೆ.

ಲಕ್ಷ್ಮಣ್ ಎಂಬುವರಿಂದ ₹ 8 ಲಕ್ಷವನ್ನು ಹತ್ತು ದಿನಗಳ ಬಳಿಕ ನೀಡುವುದಾಗಿ ಪಡೆದುಕೊಂಡು ವಂಚಿಸಲಾಗಿದೆ ಎಂದು ತಿಳಿದು ಬಂದಿದೆ.

₹ 13.5 ಲಕ್ಷ ಹಾಗೂ ಸಂಸ್ಥೆಯಲ್ಲಿ ಗ್ರಾಹಕರು ಇಟ್ಟಿದ್ದ ಒಡವೆಗಳೊಂದಿಗೆ ಪರಾರಿಯಾಗಿರುವ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ಮೋಹನ್ ಕುಮಾರ್ ನೀಡಿದ ದೂರಿನನ್ವಯ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.