ADVERTISEMENT

ಮೇಲುಕೋಟೆ: ಚೆಲುವ ನಾರಾಯಣ ಸ್ವಾಮಿ ಅಂಗಮಣಿ ಉತ್ಸವ ಇಂದು

ಸ್ವಾಮಿ ಪತ್ನಿಯರಾದ ಶ್ರೀದೇವಿ- ಭೂದೇವಿಗೆ ಮಡಿಲು ತುಂಬುವ ಶಾಸ್ತ್ರ; ಪ್ರೇಮ ಪ್ರಸಂಗ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:51 IST
Last Updated 16 ಜನವರಿ 2026, 5:51 IST
ಚೆಲುವ ನಾರಾಯಣ ಸ್ವಾಮಿಯ ಪತ್ನಿಯರಾದ ಶ್ರೀದೇವಿ, ಭೂದೇವಿ ಅಮ್ಮನವರ ಮಡಿಲು ತುಂಬುವ ಶಾಸ್ತ್ದಲ್ಲಿ ಹಣ್ಣುಗಳ ಸಮರ್ಪಣೆ (ಸಂಗ್ರಹ ಚಿತ್ರ)
ಚೆಲುವ ನಾರಾಯಣ ಸ್ವಾಮಿಯ ಪತ್ನಿಯರಾದ ಶ್ರೀದೇವಿ, ಭೂದೇವಿ ಅಮ್ಮನವರ ಮಡಿಲು ತುಂಬುವ ಶಾಸ್ತ್ದಲ್ಲಿ ಹಣ್ಣುಗಳ ಸಮರ್ಪಣೆ (ಸಂಗ್ರಹ ಚಿತ್ರ)   

ಮೇಲುಕೋಟೆ: ಮೊದಲನೇ ವೈಕುಂಠ ಎಂದೇ ಪ್ರಸಿದ್ಧಿ ಪಡೆದಿರುವ ಮೇಲುಕೋಟೆಯಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಚೆಲುವ ನಾರಾಯಣ ಸ್ವಾಮಿಯ ಪತ್ನಿಯರಾದ ಶ್ರೀದೇವಿ, ಭೂದೇವಿ ಅಮ್ಮನವರ ಮಡಿಲು ತುಂಬುವ ಶಾಸ್ತ್ರ ಹಾಗೂ ಸ್ವಾಮಿಯ ಅಂಗಮಣಿ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಲಿದೆ.

ಅಂಗಮಣಿ ಮಹೋತ್ಸವಕ್ಕೆ ಸಲಕ ಸಿದ್ಧತೆ ಕೈಗೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಅಮ್ಮನವರಿಗೆ ಗೋಷ್ಠಿ ಹಾಗೂ ವೇದ ಘೋಷದೊಂದಿಗೆ ಅಭಿಷೇಕ ನಡೆಯಲಿದೆ. ನಂತರ ಕಲ್ಯಾಣಿಗೆ ದೇವಿಯರ ಉತ್ಸವ ನೆರವೇರಲಿದ್ದು, ಅಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದು, ಸಿಂಗಾರಗೊಂಡ ದೇವಿಯರ ಉತ್ಸವ ಭವ್ಯ ಮೆರವಣಿಗೆಯಲ್ಲಿ ದೇವಾಲಯ ತಲುಪಲಿದೆ.

ಸಂಕ್ರಾತಿಯ ವೈಭವ: ರೈತರು ಸಿರಿ ಧಾನ್ಯಗಳನ್ನು ಬೆಳೆದು ಬೆಳೆಗಳ ರಾಶಿಗೆ ಪೂಜೆ ನೆರವೇರಿಸಿ ಮಕರ ಸಂಕ್ರಾಂತಿ ಹಬ್ಬವನ್ನು ಅಚರಿಸಿದರೆ, ಈ ವೇಳೆ ಮೇಲುಕೋಟೆ ದೇವಾಲಯದಲ್ಲಿ ವಿಭಿನ್ನವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಸಂಕ್ರಾಂತಿಯ ಮರುದಿನ ಶ್ರೀದೇವಿ, ಭೂದೇವಿ ಅಮ್ಮನವರಿಗೆ ದೇಶದ ಎಲ್ಲಾ ಬಗೆಯ ಹಣ್ಣುಗಳನ್ನು ನೂರಾರು ತಟ್ಟೆಗಳಲ್ಲಿ ತುಂಬಿಸಿ ಮಡಿಲು ತುಂಬಿಸುವ ಕಾರ್ಯ ದೇವಾಲಯದ ಸಂಪ್ರದಾಯದಂತೆ ನಡೆಯಲಿದೆ.

ADVERTISEMENT

ಮೇಲುಕೋಟೆಯ ಪ್ರಥಮ ಸ್ಥಾನೀಕ ಕರಗಂ ನಾರಾಯಣ ಅಯ್ಯಂಗಾರ್ ಮತ್ತು‌ 3ನೇ ಸ್ಥಾನೀಕರಾದ ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್‌ ಅವರ ಮನೆಗಳಲ್ಲಿ ಏಕಕಾಲದಲ್ಲಿ ಶುಕ್ರವಾರ ಸಂಜೆ ದೇಶದ ಎಲ್ಲಾ ಬಗೆಯ ಹಣ್ಣುಗಳನ್ನು ತಂದು ನೂರಾರು ತಟ್ಟೆಗಳಲ್ಲಿ ಜೋಡಿಸಿ ಸಂಜೆ 6 ಗಂಟೆಯ ನಂತರ ದೇವಿಯರಿಗೆ ಅರ್ಪಿಸಲಾಗುತ್ತದೆ. ಮತ್ತು ಹಣ್ಣುಗಳ ತಟ್ಟಿಯನ್ನು ವಿಕ್ಷೀಸಲು ರಾತ್ರಿ 9 ಗಂಟೆಯವರೆಗೂ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ಸಜ್ಜೆಹಟ್ಟಿ ಮಂಟಪದಲ್ಲಿ ದೇವಿಯರಿಗೆ ವಿವಿಧ ಬಗ್ಗೆಯ ಚಿನ್ನಾಭರಣ ಹಾಗೂ ಪುಷ್ಪಗಳಿಂದ ಅಲಂಕಾರ ಮಾಡಿ, ಅಕ್ಕಿ, ಬೆಲ್ಲ, ಹೂ, ಹಣ್ಣುಗಳಿಂದ ಮಡಿಲು ತುಂಬಿಸಿ, ಪೂಜಾ ಕೈಂಕರ್ಯ ನೆರವೇರಿಸಿ ಉತ್ಸವ ಮಾಡಲಾಗುತ್ತದೆ. ನಂತರ ಮರುದಿನ ಎಲ್ಲ ಹಣ್ಣುಗಳಿಂದ ಪ್ರಸಾದ ತಯಾರಿಸಿ ದೇವಿಯರಿಗೆ ಅರ್ಪಿಸಲಾಗುತ್ತದೆ.

ಅಂಗಮಣಿ ಉತ್ಸವಕ್ಕೆ ದೇವಾಲಯದ ವತಿಯಿಂದ ವಿಶೇಷ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಶೀಲಾ ಹೇಳಿದರು.

ದೇವಿಯರಿಗೆ ಹಣ್ಣುಗಳ ಸಮರ್ಪಣೆ 
ಗಂಗಾಧರ್
ಎಸ್. ಎನ್ ಟಿ ಸೋಮಶೇಖರ್

Quote - ಕ್ಷೇತ್ರದಲ್ಲಿ ನಡೆಯುವ ಅಂಗಮಣಿ ಉತ್ಸವ ತುಂಬ ವಿಶೇಷವೆನಿಸಿದ್ದು ರೈತರಿಗೆ ಸಂತಸ ತರುವ ಏಕೈಕ ಹಬ್ಬದವಾಗಿದೆ. ಗಂಗಾಧರ್ ಕಾಂಗ್ರೆಸ್ ಯುವ ಘಟಕದ ಹೋಬಳಿ ಅಧ್ಯಕ್ಷ

Quote - ಮಕರ ಸಂಕ್ರಾಂತಿ ಅಂಗವಾಗಿ ಮೇಲುಕೋಟೆಯಲ್ಲಿ ಅಂಗಮಣಿ ಉತ್ಸವ ನಡೆಯಲಿದೆ. ಸುತ್ತಮುತ್ತಲಿನ ರೈತರು ತಾವು ಬೆಳೆ ಹಣ್ಣು–ಹಂಪಲುಗಳನ್ನು ದೇವಿಯರಿಗೆ ಬಾಗಿನ ನೀಡುವಂತಹ ಸಂಕೇತ ಉತ್ಸವವಾಗಿದೆ ಎಸ್.ಎನ್.ಟಿ ಸೋಮಶೇಖರ್ ಬಿಜೆಪಿ ಮೇಲುಕೋಟೆ ಹೋಬಳಿ ಅಧ್ಯಕ್ಷ

Cut-off box - ಚೆಲುವನಾರಾಯಣ ಸ್ವಾಮಿ ಪ್ರೇಮ ಪ್ರಸಂಗ ಚೆಲುವ ನಾರಾಯಣ ಸ್ವಾಮಿ ಪತ್ನಿಯರ ಜತೆ ಜಗಳವಾಡಿ ಇನ್ನೊಂದು ಮದುವೆಯಾಗಲು ದೇವಾಲಯ ಬಿಟ್ಟು ಬರುತ್ತಾರೆ. ನಂತರ ದೇವಿಯರು ಸ್ವಾಮಿಯನ್ನು ಹಿಂಬಾಲಿಸಿ ಹೋಗಿ ಸ್ವಾಮಿಯನ್ನು ಪ್ರೀತಿಯಿಂದ ಮನವೊಲಿಸಿ ದೇವಾಲಯಕ್ಕೆ ಕರೆತರುತ್ತಾರೆ. ಈ ಸನ್ನಿವೇಶವನ್ನು ಸಾವಿರಾರು ವರ್ಷಗಳಿಂದ ಉತ್ಸವದ ರೀತಿಯ ನಡೆಸಿಕೊಂಡು ಬರಲಾಗುತ್ತಿದೆ. ಈ ಉತ್ಸವ ನೋಡಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರೂ ಭಕ್ತರು ಆಗಮಿಸಿ ತಡರಾತ್ರಿಯವರೆಗೂ ಕಾಯುತ್ತಾರೆ. ಉತ್ಸವದ ಸಮಯದಲ್ಲಿ ಚೆಲುವ ನಾರಾಯಣ ಸ್ವಾಮಿಗೆ ಮೊಲವನ್ನು ತೋರಿಸಿ ಎಸೆಯಲಾಗುವುದು. ಈ ಮೊಲ ಯಾರಿಗಾದರೂ ಸಿಕ್ಕರೆ ಅದು ಅದೃಷ್ಟದ ಸಂಕೇತ ಎನ್ನುವುದು ಇಲ್ಲಿನ ಭಕ್ತರ ನಂಭಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.