ಮೇಲುಕೋಟೆ (ಮಂಡ್ಯ ಜಿಲ್ಲೆ): ಹಲವು ದಶಕಗಳ ಬಳಿಕ ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅ.31ರಂದು ರಾಜಮುಡಿ ಉತ್ಸವ ಹಾಗೂ ಅಷ್ಟ ತೀರ್ಥೋತ್ಸವ ಒಟ್ಟಿಗೆ ನಡೆಯುತ್ತಿದ್ದು, ಅಪರೂಪ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಪ್ರತಿವರ್ಷ ಅಷ್ಟ ತೀರ್ಥೋತ್ಸವಕ್ಕೂ ಮೊದಲು ರಾಜಮುಡಿ ಉತ್ಸವ ನಡೆಯುತ್ತಿತ್ತು. ನಂತರ 6ನೇ ತಿರುನಾಳ್ ದಿವಸ ಅಷ್ಟ ತೀರ್ಥೋತ್ಸವ ನೆರವೇರುತ್ತಿತ್ತು. ಈ ಬಾರಿ ವಿಶೇಷ ನಕ್ಷತ್ರ ಬಂದಿರುವ ಕಾರಣದಿಂದ ಎರಡೂ ವಿಶೇಷ ಉತ್ಸವಗಳು ಒಂದೇ ದಿನ ನಡೆಯುತ್ತಿರುವುದು ಭಕ್ತರ ಪಾಲಿಗೆ ಅತ್ಯಂತ ಪವಿತ್ರವಾಗಿದೆ.
‘ಅ.31ರಂದು ಬೆಳಿಗ್ಗೆ ಅಷ್ಟ ತೀರ್ಥೋತ್ಸವ ಹಾಗೂ ರಾತ್ರಿ ರಾಜಮುಡಿ ಉತ್ಸವ ನಡೆಯಲಿದ್ದು, ಎರಡೂ ಉತ್ಸವಗಳಲ್ಲಿ ಚೆಲುವನಾರಾಯಣ ಸ್ವಾಮಿ ಮೂರ್ತಿಯನ್ನು ಮೈಸೂರು ಮಹಾರಾಜರು ನೀಡಿರುವ ಸಿಂಹ ಲಾಂಛನವಿರುವ ಅಪರೂಪದ ವಜ್ರದ ರಾಜಮುಡಿ ಕಿರೀಟ, ರಾಜಲಾಂಛನದ ಗಂಡಭೇರುಂಡ ಪದಕ, 12 ಆಳ್ವಾರ್‌ಗಳನ್ನು ಒಳಗೊಂಡ ಪದ್ಮಪೀಠ, ಶಂಖ, ಚಕ್ರ, ಗದೆ, ಶಿರಶ್ಚಕ್ರ, ಅಭಯಹಸ್ತ, ಪಾದಜೋಡಿ ಕರ್ಣಕುಂಡಲ ಸೇರಿದಂತೆ ವಜ್ರ, ಪಚ್ಚೆ ರತ್ನ ಮುತ್ತುಗಳಿಂದ ಕೂಡಿದ 16 ಬಗೆಯ ಐತಿಹಾಸಿಕ ಆಭರಣಗಳನ್ನು ತೊಡಿಸಲಾಗುತ್ತದೆ’ ಎಂದು ದೇವಾಲಯದ ಪಾರುಪತ್ತೇಗಾರರು ತಿಳಿಸಿದ್ದಾರೆ.
ಕಾರ್ತಿಕ ಮಾಸದ ರಾಜಮುಡಿ ಬ್ರಹೋತ್ಸವ ಅ.26ರಂದು ಅಂಕುರಾರ್ಪಣೆಯೊಂದಿಗೆ ಆರಂಭವಾಗಿ ನ.5ರವರೆಗೆ 10 ದಿವಸ ನಡೆಯಲಿದ್ದು, ಗಂಡಭೇರುಂಡ ಪದಕ ಮೈಸೂರು ಅರಸರ ಕುಲದೈವ ಚೆಲುವನಾರಾಯಣಸ್ವಾಮಿಗೆ 600 ವರ್ಷಗಳಿಂದ ರಾಜಮುಡಿ ಬ್ರಹೋತ್ಸವವಾಗಿ ನಡೆಯುತ್ತಾ ಬಂದಿದೆ.
ಮಕ್ಕಳಭಾಗ್ಯ ಕರುಣಿಸುವ ತೊಟ್ಟಿಲಮಡು ಜಾತ್ರೆಯಂದೇ ಪ್ರಖ್ಯಾತವಾದ ಅಷ್ಟ ತೀರ್ಥೋತ್ಸವ ಅ.31ರಂದು ಕಣಿವೆ ಬಳಿಯಿರುವ ತೊಟ್ಟಿಲಮಡು ಬಳಿ ಸಂಜೆ 4ರಿಂದ ನಡೆಯುವ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುವರು. ಅಷ್ಟ ತೀರ್ಥೋತ್ಸವದಲ್ಲಿ ಮಕ್ಕಳಿಲ್ಲದ ದಂಪತಿ ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ.
ವರ್ಷದಿಂದ ವರ್ಷಕ್ಕೆ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಅಷ್ಟತೀರ್ಥೋತ್ಸವ ಬೆಳಿಗ್ಗೆ 8ಕ್ಕೆ ಕಲ್ಯಾಣಿಯಲ್ಲಿ ಮೊದಲ ಅಭಿಷೇಕದೊಂದಿಗೆ ಆರಂಭವಾಗಿ ಸಂಜೆ 4 ಗಂಟೆಗೆ ವೈಕುಂಠ ಗಂಗೆ ತೊಟ್ಟಿಲ ಮಡುವಿನಲ್ಲಿ ಕೊನೆ ಅಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ. ಬಳಿಕ ಯೋಗ ನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆ ನಡೆದು ಮಹೋತ್ಸವ ರಾತ್ರಿ 8ರ ವೇಳೆಗೆ ಮುಕ್ತಾಯವಾಗಲಿದೆ.
ಗ್ರಾಮ ಪಂಚಾಯಿತಿಯಿಂದ ದೀಪಾಲಂಕಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ವನಭೋಜನ ಏರ್ಪಡಿಸಿ ಜಾತ್ರೆಗೆ ಭಕ್ತರಿಗೆ ವಿತರಣೆ ಮಾಡಲಿದ್ದಾರೆ.