ADVERTISEMENT

ಮಂಡ್ಯದಲ್ಲಿ ಕೆಮಿಕಲ್‌ ಟ್ಯಾಂಕ್‌ ಸ್ಫೋಟ: ಇಬ್ಬರು ಕಾರ್ಮಿಕರ ಸಾವು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 8:22 IST
Last Updated 15 ಫೆಬ್ರುವರಿ 2026, 8:22 IST
<div class="paragraphs"><p>ಕೆಮಿಕಲ್‌ ಟ್ಯಾಂಕ್‌ ಸ್ಫೋಟ</p></div>

ಕೆಮಿಕಲ್‌ ಟ್ಯಾಂಕ್‌ ಸ್ಫೋಟ

   

ಮಂಡ್ಯ: ತಾಲ್ಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಸಮೀಪ ಕೀರ್ತಿ ಕೆಮಿಕಲ್‌ ಕಾರ್ಖಾನೆಯನ್ನು ಸ್ಥಳಾಂತರ ಮಾಡುವ ವೇಳೆ ಭಾನುವಾರ ಕೆಮಿಕಲ್‌ ಟ್ಯಾಂಕ್‌ ಸ್ಫೋಟಗೊಂಡು, ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಬಿಹಾರ ಮೂಲದ ಕಲೂಹ್‌ಖಾನ್‌ (27) ಮತ್ತು ಅಶೋಕ್‌ (26) ಮೃತ ಕಾರ್ಮಿಕರು. ಟ್ಯಾಂಕ್‌ ಸ್ಫೋಟಗೊಂಡ ತೀವ್ರತೆಗೆ ಇಬ್ಬರು ಕಾರ್ಮಿಕರ ದೇಹಗಳು ಛಿದ್ರಛಿದ್ರವಾಗಿವೆ. ಖಾಸಿಂ, ರವಿ, ಮಹಾಂತೇಶ್‌, ರಾಜೀವ್‌ಕುಮಾರ್‌ ಈ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ಮಂಡ್ಯದ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ADVERTISEMENT

ಕಾರೇಕಟ್ಟೆಯಲ್ಲಿರುವ ಕಾರ್ಖಾನೆಯ ಸಾಮಗ್ರಿಗಳನ್ನು ಬೇರೆ ಕಡೆಗೆ ಸಾಗಿಸುವ ಕಾರ್ಯ ಒಂದು ತಿಂಗಳಿನಿಂದ ನಡೆಯುತ್ತಿತ್ತು. ಭಾನುವಾರ ರಾಸಾಯನಿಕ ಟ್ಯಾಂಕ್‌ ತೆರವು ಮಾಡುವ ವೇಳೆ ದುರ್ಘಟನೆ ಸಂಭವಿಸಿದೆ.

ಇದೇ ಕಾರ್ಖಾನೆಯಲ್ಲಿ 4 ವರ್ಷಗಳ ಹಿಂದೆ (2022ರಲ್ಲಿ) ವಿಷಾನಿಲ ಸೋರಿಕೆಯಾಗಿ ನೂರಾರು ಎಕರೆ ಬೆಳೆ ಹಾನಿಯಾಗಿತ್ತು ಮತ್ತು ಎರಡು ನಾಯಿಗಳು ಮೃತಪಟ್ಟಿದ್ದವು. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿತ್ತು. 

ಬಳಿಕ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾನಿಯಾದ ಬೆಳೆಗೆ ಮಂಡ್ಯ ಜಿಲ್ಲಾಡಳಿತ ಕಾರ್ಖಾನೆಯವರಿಂದ ಪರಿಹಾರ ಕೊಡಿಸಿತ್ತು. ಈವರೆಗೆ ಕಾರ್ಖಾನೆ ಅಧಿಕೃತವಾಗಿ ಆರಂಭವೇ ಆಗಿರಲಿಲ್ಲ. ಹೀಗಾಗಿ ಕಾರ್ಖಾನೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಮಾಲೀಕರು ಮುಂದಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.